ADVERTISEMENT

ಮುನಿರತ್ನ ಎಂಜಲು ತಿಂದು ಬದುಕುತ್ತಿದ್ದೀರಿ...

ತನಿಖಾಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್‌ನ ನ್ಯಾಯಾಧೀಶರಿಂದ ತೀವ್ರ ತರಾಟೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 9:45 IST
Last Updated 6 ಆಗಸ್ಟ್ 2019, 9:45 IST
ಶಾಸಕ ಮುನಿರತ್ನ
ಶಾಸಕ ಮುನಿರತ್ನ    

ಬೆಂಗಳೂರು: ‘ನೀವೆಲ್ಲಾ ಮುನಿರತ್ನ ಬಿಸಾಕಿದ ಎಂಜಲು ತಿಂದು ಬದುಕುತ್ತಿದ್ದೀರಿ, ನಿಮಗೆ ಪ್ರಾಮಾಣಿಕತೆ ಎಂಬುದೇ ಗೊತ್ತಿಲ್ಲ, ಹಫ್ತಾಗೆ ಬಾಯ್ದೆರೆದಿರುವ ನಿಮಗೆ ನಾಚಿಕೆ ಆಗಬೇಕು, ದುಡ್ಡಿಗೆ ಕೈಯೊಡ್ಡಿ ನಿಂತಿರುವ ನಿಮ್ಮ ಈ ಪ್ರವೃತ್ತಿ ನಿಮ್ಮ ಹೆಂಡತಿ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ...’

‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನರ್ಹಗೊಂಡಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಈತನಕ ದೂರು ದಾಖಲಿಸಿಲ್ಲ’ ಎಂಬ ಕಾರಣಕ್ಕೆ ಜಾಲಹಳ್ಳಿ ಪೊಲೀಸರ ವರ್ತನೆಯನ್ನು ಜನಪ್ರತಿನಿಧಿಗಳ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿ ಇದು.

ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿದ್ದ ಖಾಸಗಿ ದೂರಿನ ಪ್ರಕರಣವನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಶನಿವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ ತನಿಖಾಧಿಕಾರಿಗಳು, ಪ್ರಾಸಿಕ್ಯೂಷನ್‌ ವಿಭಾಗದ ಸಲಹೆಗಾರರ ಪತ್ರವನ್ನು ನ್ಯಾಯಾಧೀಶರಿಗೆ ನೀಡಿದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಹುದ್ದಾರ ಅವರು, ‘ಈತನಕ ಆರೋಪಿ ಮುನಿರತ್ನ ವಿರುದ್ಧ ನೀವು ದೂರು ದಾಖಲಿಸಿಲ್ಲ, ಹೀಗಾದರೆ ದೂರು ಕೊಟ್ಟವರು ಏನಾಗಬೇಕು, ಈ ಹಿಂದೆಯೇ ನಿರ್ದೇಶನ ನೀಡಿದ್ದರೂ ಯಾಕೆ ದೂರು ದಾಖಲಿಸಿಲ್ಲ, ಬರೀ ಸಬೂಬು ಹೇಳುತ್ತೀರಲ್ಲ, ನಿಮ್ಮಂತಹ ಪೊಲೀಸರಿಂದ ಇಡೀ ಇಲಾಖೆಯೇ ಗಬ್ಬೆದ್ದು ಹೋಗಿದೆ’ ಎಂದು ಝಾಡಿಸಿದರು.

‘ಸಮಾಜದ ಬಗ್ಗೆ ಇನಿತೂ ಕಾಳಜಿ ಇಲ್ಲದ ನೀವು ಹಣಕ್ಕಾಗಿ ಏನೂ ಮಾಡಲು ಹೇಸುವುದಿಲ್ಲ. ಮನುಷ್ಯ ಕೊಟ್ಟಿದ್ದು ಮನೆತನಕ ಮಾತ್ರ ಎಂಬುದನ್ನು ಮರೆಯಬೇಡಿ, ಆರೋಪಿಗೆ ಸಹಾಯ ಮಾಡುತ್ತಿರುವ ನಿಮ್ಮ ಈ ವರ್ತನೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಸೇರಿದ್ದು. ಈ ಪ್ರಕರಣದ ತನಿಖಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ನಾನು ಸೂಕ್ತ ಆದೇಶ ಮಾಡುತ್ತೇನೆ. ಹೈಕೋರ್ಟ್‌ನಲ್ಲೇ ನಿಮ್ಮ ಹಣೆಬರಹ ತೀರ್ಮಾನವಾಗಲಿ’ ಎಂದು ವಿಚಾರಣೆ ಮುಂದೂಡಿದರು.

ಜಾಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಸ್‌ಎಲ್‌ವಿ ಪಾರ್ಕ್‌ ವ್ಯೂವ್‌ ಅಪಾರ್ಟ್‌ಮೆಂಟ್‌ನಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆ ಮೇ 12ರಂದು ದೊರೆತಿದ್ದ 10 ಸಾವಿರಕ್ಕೂ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌.ರಾಕೇಶ್ ಎಂಬ ಬಿಜೆಪಿ ಕಾರ್ಯಕರ್ತ ದಾಖಲಿಸಿರುವ ಖಾಸಗಿ ದೂರು ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.