
ಬೆಂಗಳೂರು: ‘ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ನಿವೃತ್ತ ಜಿಲ್ಲಾ ನ್ಯಾಯಾಧೀಶ ದೇವಾನಂದ ಪುಟ್ಟಪ್ಪ ನಾಯಕ್ ಸಲ್ಲಿಸಿದ್ದ ರಿಟ್ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನೇಮಕ ಅಥವಾ ಆಯ್ಕೆಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಹಾಗಾಗಿ, ಸರ್ಕಾರ ತುರ್ತಾಗಿ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ’ ಎಂದು ಆದೇಶದಲ್ಲಿ ವಿವರಿಸಿದೆ.
‘ಯಾವುದೇ ಆಯ್ಕೆ ಮಾನದಂಡ ಅಥವಾ ಪ್ರಕ್ರಿಯೆ ಸೂಚಿಸಲು ವಿಫಲವಾದರೆ ರಾಜ್ಯದ ವತಿಯಿಂದ ಕರ್ತವ್ಯ ಲೋಪ ಎಸಗಿದಂತಾಗಲಿದೆ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ–2011ರ ಕಲಂ 7ರ ಅನುಸಾರ ಒಬ್ಬ ಅಧ್ಯಕ್ಷ, ಇಬ್ಬರು ನ್ಯಾಯಾಂಗ ಮತ್ತು ಇಬ್ಬರು ಕಂದಾಯ ಸದಸ್ಯರನ್ನು ಹೊಂದಿರುವ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಈ ಕಾಯ್ದೆಯು ಕನಿಷ್ಠ ಅರ್ಹತೆಗಳನ್ನು ಮಾತ್ರವೇ ಸೂಚಿಸುತ್ತದೆ. ಅಧ್ಯಕ್ಷರು ಹಾಲಿ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಆಗಿರಬೇಕು. ನ್ಯಾಯಾಂಗ ಸದಸ್ಯರು ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶ ಆಗಿರಬೇಕು ಮತ್ತು ಕಂದಾಯ ಸದಸ್ಯರು ಉಪ ವಿಭಾಗಾಧಿಕಾರಿ ಹುದ್ದೆಗಿಂತ ಕಡಿಮೆಯಿಲ್ಲದ ಹುದ್ದೆಯನ್ನು ಹೊಂದಿರಬೇಕು ಎಂದಷ್ಟೇ ಹೇಳುತ್ತದೆ. ಆದರೆ, ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
Cut-off box - ಸಚಿವರ ಟಿಪ್ಪಣಿ–ಪ್ಲೀಡರ್ ಪಲ್ಲಟ: ಹೈಕೋರ್ಟ್ ಕಿಡಿ ಬೆಂಗಳೂರು: ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಪ್ಲೀಡರ್ ಆಗಿ ನೇಮಕಗೊಂಡಿದ್ದ ವಕೀಲರೊಬ್ಬರನ್ನು 24 ಗಂಟೆಗಳಲ್ಲೇ ಆ ಸ್ಥಾನದಿಂದ ತೆಗೆದುಹಾಕಿದ ಸರ್ಕಾರದ ನಡೆಗೆ ಕಿಡಿ ಕಾರಿರುವ ಹೈಕೋರ್ಟ್ ನೇಮಕಾತಿ ಆದೇಶವನ್ನು ಪುನರ್‌ಸ್ಥಾಪಿಸಿದೆ. ಈ ಸಂಬಂಧ ಅಥಣಿಯ ವಕೀಲ ಸುನಿಲ್ ಅಣ್ಣಪ್ಪ ಸಂಕ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ‘ಸರ್ಕಾರದ ಈ ನಿರ್ಧಾರ ಏಕಪಕ್ಷೀಯ’ ಎಂದು ತರಾಟೆಗೆ ತೆಗೆದುಕೊಂಡಿದೆ. ‘ನಿಯುಕ್ತಿಗೊಂಡ ಪ್ಲೀಡರ್ ಅನ್ನು ಸಕಾರಣವಿಲ್ಲದೆ ತೆಗೆದುಹಾಕಲಾಗಿದೆ. ಇದಕ್ಕೆ ಮುಖ್ಯ ಕಾರಣ ಸಚಿವರೊಬ್ಬರ ಟಿಪ್ಪಣಿ. ಸರ್ಕಾರದ ವಿವೇಚನಾ ಅಧಿಕಾರವನ್ನು ಹೀಗೆ ದುರ್ಬಳಕೆ ಮಾಡಿದರೆ ಯಾರಿಗೂ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ‘ಕಾರ್ಯಾಂಗ ಮನಸ್ಸಿಗೆ ಬಂದಂತೆಲ್ಲಾ ನಡೆದುಕೊಳ್ಳುವುದನ್ನು ನೋಡಿಕೊಂಡು ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಕುಳಿತಿರಲಾಗದು. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಸೂಕ್ತವಷ್ಟೇ ಅಲ್ಲ ಅನಿವಾರ್ಯವೂ ಆಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ‘ಸಂವಿಧಾನದ 14ನೇ ವಿಧಿಯಡಿ ಪ್ರತಿಯೊಬ್ಬ ವ್ಯಕ್ತಿಗೂ ಕೊಡಮಾಡಿರುವ ಕಾನೂನಾತ್ಮಕ ರಕ್ಷಣೆಯನ್ನು ರಾಜ್ಯ ಸರ್ಕಾರ ಮರೆಯಬಾರದು. ರಾಜ್ಯದ ಪ್ರತಿಯೊಂದು ಕ್ರಮವೂ ಅತ್ಯಂತ ವಿವೇಚನೆಯಿಂದ ಕೂಡಿರಬೇಕಾಗುತ್ತದೆ ಮತ್ತು ಯಾವುದೇ ಕ್ರಮವನ್ನು ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗದು’ ಎಂದು ಸರ್ಕಾರದ ನಡೆಯನ್ನು ನ್ಯಾಯಪೀಠ ಕಟು ಶಬ್ದಗಳಲ್ಲಿ ಟೀಕಿಸಿದೆ. ಸುನಿಲ್ ಅವರನ್ನು ಅಕ್ಟೋಬರ್ 28ರಂದು ಬೆಳಗಾವಿಯ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಪ್ಲೀಡರ್ ಆಗಿ ನೇಮಕ ಮಾಡಲಾಗಿತ್ತು. ಆ ನೇಮಕ ಆದೇಶ ಹೊರಬಿದ್ದ 24 ಗಂಟೆಗಳಲ್ಲಿ ಕಾನೂನು ಮತ್ತು ನ್ಯಾಯ ಇಲಾಖೆ ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸಿ ಆ ಸ್ಥಾನಕ್ಕೆ ಡಿ.ಬಿ.ತಕ್ಕಣವರ್ ಅವರನ್ನು ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Cut-off box - ಬಿಕ್ಲು ಶಿವು ಕೊಲೆ: ಜಾಮೀನು ತಿರಸ್ಕೃತ ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಜಾಮೀನು ಕೋರಿ ಕಿರಣ್ (ಆರೋಪಿ-2) ವಿಮಲ್ ರಾಜ್ (ಎ-3) ಪ್ರದೀಪ್ (ಎ-6) ಮತ್ತು ಆರ್.ಮದನ್ (ಎ-7) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ. ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಿನಿ ಅವೆನ್ಯೂ ರಸ್ತೆಯಲ್ಲಿರುವ ಸೇಫ್ ಮೆಡಿಕಲ್ ಸ್ಟೋರ್ ಮುಂಭಾಗ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದು ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಸಂಬಂಧ ಭಾರತಿನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ಪೊಲೀಸರಿಗೆ ವಹಿಸಲಾಗಿದೆ. ಪ್ರಕರಣದಲ್ಲಿ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರ ಆರೋಪಿಗಳನ್ನು ಬಂಧಿಸಿದ್ದರು. ‘ಪ್ರಕರಣ ದಾಖಲಾಗಿ 90 ದಿನ ಕಳೆದಿದ್ದರೂ ತನಿಖಾಧಿಕಾರಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿಲ್ಲ’ ಎಂಬ ಕಾರಣಕ್ಕೆ ಆರೋಪಿಗಳು ಡಿಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2025ರ ಅಕ್ಟೋಬರ್ 17ರಂದು ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.