ADVERTISEMENT

ಸಚಿವ ಸೋಮಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಸಮನ್ಸ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 20:33 IST
Last Updated 22 ಮಾರ್ಚ್ 2022, 20:33 IST
ವಸತಿ ಸಚಿವ ವಿ. ಸೋಮಣ್ಣ
ವಸತಿ ಸಚಿವ ವಿ. ಸೋಮಣ್ಣ   

ಬೆಂಗಳೂರು: ‘ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್‌ಗೆ ಖುದ್ದು ಹಾಜರಾಗಲುವಸತಿ ಸಚಿವ ವಿ. ಸೋಮಣ್ಣ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ.

‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದನ್ಯಾಯಾಧೀಶ ಬಿ. ಜಯಂತ್‌ ಕುಮಾರ್‌ (ಸಿಸಿಎಚ್‌–91) ಈ ಕುರಿತಂತೆ ಆದೇಶಿಸಿದ್ದು, ಸೋಮಣ್ಣ, ಏಪ್ರಿಲ್‌ 16ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದ್ದಾರೆ.

ಇದೇ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿ ಸಲ್ಲಿಸಿರುವ ವರದಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದು, ‘ಸೋಮಣ್ಣಮತ್ತು ಅವರ ಕುಟುಂಬದ ಸದಸ್ಯರ ಆದಾಯ ಮೂಲಗಳು ದಿನೇ ದಿನೇ ಹೇಗೆ ವೃದ್ಧಿಯಾಯಿತು ಎಂಬ ಬಗ್ಗೆ ಸೂಕ್ತ ತನಿಖೆ ನಡೆದಿಲ್ಲ. ಎಲ್ಲವನ್ನೂ ಮುಚ್ಚಿಡಲಾಗಿದೆ’ ಎಂಬ ಆರೋಪವನ್ನು ಪುರಸ್ಕರಿಸಿದ್ದಾರೆ. ಆರೋಪಿಯು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆಯೂ ನಿರ್ದೇಶಿಸಿದ್ದಾರೆ.

ADVERTISEMENT

ಮೂಡಲಪಾಳ್ಯದ ರಾಮಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಮುಖ್ಯಾಂಶಗಳು:

*ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974 ರಲ್ಲಿ ಸಹಾಯಕ ಮಾರಾಟಗಾರರಾಗಿ ಕೆಲಸ ಆರಂಭಿಸಿದ ಸೋಮಣ್ಣ ಪ್ರತಿ ತಿಂಗಳಿಗೆ ₹ 231 ಸಂಬಳ ಪಡೆಯುತ್ತಿದ್ದರು.

*1983 ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅವರ ಒಟ್ಟು ದುಡಿಮೆಯ ಮೊತ್ತ ₹15,330.65 ಪೈಸೆ ಇತ್ತು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಹೊಸಹಳ್ಳಿ ವಾರ್ಡ್‌ ನಗರಸಭೆ ಸದಸ್ಯರಾಗಿ ಆಯ್ಕೆಯಾದರು.

*ಇಲ್ಲಿಂದ ಆರಂಭವಾದ ಇವರ ಜನಪ್ರತಿನಿಧಿ ಸೇವಾವಧಿಯಲ್ಲಿ, ಇವರು ಕೋಟ್ಯಂತರ ರೂಪಾಯಿಗಳ ಸ್ಥಿರ ಮತ್ತು ಚರಾಸ್ತಿ ಸಂಪಾದನೆ ಮಾಡಿದ್ದಾರೆ.

*ಸೋಮಣ್ಣ ಮತ್ತು ಅವರ ಕುಟುಂಬದವರು ಬೆಂಗಳೂರು, ಮಂಗಳೂರು ಮತ್ತು ಮೈಸೂರುಗಳಲ್ಲಿ ಸಾಕಷ್ಟು ಅಕ್ರಮ ಸ್ಥಿರಾಸ್ತಿ ಹೊಂದಿದ್ದಾರೆ. ಮಾರ್ಗದರ್ಶಿ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಜಮೀನುಗಳನ್ನು ಖರೀದಿಸಿದ್ದಾರೆ. ಎಸಿಬಿ ತನಿಖೆಯಲ್ಲಿ ಕೇವಲ ಇವರ ವೈಯಕ್ತಿಕ ಮತ್ತು ಖಾಸಗಿ ಸಾಲಗಳ ಬಗ್ಗೆ ತನಿಖೆ ನಡೆಸಲಾಗಿದೆ.

* ಸೋಮಣ್ಣ ಸಾರ್ವಜನಿಕ ಸೇವಕರಾಗಿ ಅಕ್ರಮ ಸಂಪಾದನೆ ಮಾಡುವ ಮೂಲಕ ಕ್ರಿಮಿನಲ್ ದುರ್ನಡತೆ ತೋರಿದ್ದಾರೆ. ಆದ್ದರಿಂದ, ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ- 1988ರ ಕಲಂ 13(1)(ಬಿ) (ಡಿ) ಮತ್ತು (ಇ) ಕಲಂ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.