ADVERTISEMENT

ಟೈಲರ್‌ಗಳ ನೋಂದಣಿಗೆ ಅಭಿಯಾನ: ಶಿವರಾಮ ಹೆಬ್ಬಾರ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 15:55 IST
Last Updated 7 ಮಾರ್ಚ್ 2022, 15:55 IST
ಶಿವರಾಮ ಹೆಬ್ಬಾರ್‌
ಶಿವರಾಮ ಹೆಬ್ಬಾರ್‌   

ಬೆಂಗಳೂರು: ರಾಜ್ಯದಲ್ಲಿರುವ ಟೈಲರ್‌ಗಳನ್ನು ಕೇಂದ್ರ ಸರ್ಕಾರದ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ಟೈಲರ್‌ಗಳಿಗೆ ಪ್ರತ್ಯೇಕವಾದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮತ್ತು ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ನಿಯಮ 330ರ ಅಡಿಯಲ್ಲಿ ಸೋಮವಾರ ನಡೆಸಿದ ಚರ್ಚೆಗೆ ಉತ್ತರಿಸಿದ ಸಚಿವರು ಈ ಭರವಸೆ ನೀಡಿದರು.

‘ಕೋವಿಡ್‌ ಅವಧಿಯಲ್ಲಿ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಟೈಲರ್‌ಗಳನ್ನು ಗುರುತಿಸಿ ನೆರವು ನೀಡಲಾಗಿದೆ. ಟೈಲರ್‌ಗಳನ್ನು ಫಲಾನುಭವಿಗಳಾಗಿ ಆಯ್ಕೆಮಾಡಲು ಮಾಹಿತಿ ಕೊರತೆ ಇತ್ತು. ಈ ಕಾರಣಕ್ಕಾಗಿ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲಾಗುತ್ತಿದೆ. ಈವರೆಗೆ 4.24 ಲಕ್ಷ ಟೈಲರ್‌ಗಳು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದರು.

ADVERTISEMENT

ಎಲ್ಲ ಟೈಲರ್‌ಗಳನ್ನೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.

ತಮಿಳುನಾಡು ಮಾದರಿಯಲ್ಲಿ ಟೈಲರ್‌ಗಳಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಹರಿಪ್ರಸಾದ್‌ ಮತ್ತು ಹರೀಶ್‌ ಕುಮಾರ್‌ ಒತ್ತಾಯಿಸಿದರು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.