ADVERTISEMENT

ಸ್ವಾದ ನೀರಿನ ವಿಭಿನ್ನ ರುಚಿ..

ಸುಬ್ರಹ್ಮಣ್ಯ ಎಚ್.ಎಂ
Published 26 ಏಪ್ರಿಲ್ 2019, 20:01 IST
Last Updated 26 ಏಪ್ರಿಲ್ 2019, 20:01 IST
ವಿವಿಧ ಸ್ವಾದದ ನೀರಿನ ಬಾಟಲಿಗಳು
ವಿವಿಧ ಸ್ವಾದದ ನೀರಿನ ಬಾಟಲಿಗಳು   

ಸೇಬು, ಮಾವು, ದ್ರಾಕ್ಷಿ, ನಿಂಬೆ, ಕಿತ್ತಳೆ, ಮೂಸಂಬಿ, ಕಲ್ಲಂಗಡಿ, ಸೀಬೆ ಹೀಗೆ ಹಲವು ಹಣ್ಣುಗಳ ಸ್ವಾದ ಇರುವ ನೀರುನಮ್ಮ ನಗರದ ಮಾರುಕಟ್ಟೆ ಪ್ರವೇಶ ಮಾಡಿದೆ. ಜ್ಯೂಸ್‌ ಕುಡಿದ ಅನುಭವವಾದರೂ ಇದು ಕೇವಲ ನೀರಷ್ಟೇ. ರುಚಿ ಮಾತ್ರ ಭಿನ್ನ. ದೇಹ ತಂಪಾಗಲು, ಆರೋಗ್ಯ ಸದೃಢತೆಗೆ ಈ ಸ್ವಾದ ನೀರು ಮುಖ್ಯವಾಗಿದೆ.

ಬಾಟಲಿ ನೀರಿನ ಬಗ್ಗೆ ಹಲವರ ಆಕ್ರೋಶಗಳಿವೆ. ಅದರ ನಡುವೆ ಈ ಸ್ವಾದಿಷ್ಟ ನೀರು ಸದ್ದಿಲ್ಲದೆ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಮಧ್ಯಮ, ಮೇಲು ಮಧ್ಯಮ ಹಾಗೂ ಶ್ರೀಮಂತರು ಈ ಸ್ವಾದಿಷ್ಟ ನೀರು ಸೇವನೆ ಪ್ರಿಯರು. ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳಲ್ಲಿ ಈ ನೀರನ್ನು ಮಾರಾಟ ಮಾಡಲಾಗುತ್ತದೆ. ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಈ ಎನರ್ಜಿ ಡ್ರಿಂಕ್ಸ್‌ನ ಬಳಕೆದಾರರು.

ಈ ಸ್ವಾದಿಷ್ಟ ನೀರು ಸಾರ್ವತ್ರಿಕ ದ್ರಾವಕ. ಇದು ದೇಹದ ಉಷ್ಣತೆ ನಿಯಂತ್ರಿಸಬಲ್ಲದು. ದೇಹದ ತ್ಯಾಜ್ಯ ಹೊರಹಾಕಲು, ಆಹಾರದ ಜೀರ್ಣ ಕ್ರಿಯೆಯಲ್ಲಿಯೂ ಸಹಾಯ ಮಾಡಬಲ್ಲದು. ಶ್ವಾಸಕೋಶವನ್ನು ತೇವಗೊಳಿಸಲು ಮತ್ತು ರಕ್ತ ಪರಿಚಲನೆಗೂ ಸಹಾಯಕ ಧಾತುವಾಗಿ ಕೆಲಸ ಮಾಡುತ್ತದೆ. ಹಿಮಾಲಯ ತಪ್ಪಲಿನ ಪ್ರದೇಶದಿಂದ ನೀರು ತಂದು ಕೆಲ ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಮಾರಾಟ ಮಾಡಲಾಗುತ್ತಿದೆ.

ADVERTISEMENT

ಮಿನರಲ್‌ ಬಾಟಲಿ ನೀರಿಗಿಂತ ಇದರ ಬೆಲೆಯೂ ಹೆಚ್ಚು ಎನ್ನುತ್ತಾರೆ ಬ್ರಿಗ್ರೆಡ್‌ ರಸ್ತೆ ನೀಲಗಿರಿಸ್‌ ಮಳಿಗೆಯ ಸಿಬ್ಬಂದಿಯೊಬ್ಬರು. ಭೂಮಿ ಮೇಲ್ಮೈಯಲ್ಲಿ ಶೇ70 ಭಾಗದಲ್ಲಿ ನೀರು ಇದೆ. ಆದರೆ, ಶುದ್ಧವಾಗಿ ಬಳಸಬಹುದಾದ ನೀರು ಕೇವಲ ಶೇ3ರಷ್ಟು ಮಾತ್ರ. ಪ್ರಪಂಚದಲ್ಲಿ ಒಟ್ಟು 140ಕೋಟಿ ಘನ ಕಿಮೀಗಳಷ್ಟು ನೀರು ವಿವಿಧ ರೂಪಗಳಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರ, ಧ್ರುವ ಪ್ರದೇಶ, ಘನರೂಪ, ಮೋಡ ಹಾಗೂ ನೀರಾವಿ ರೂಪದಲ್ಲಿದೆ. ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಯಿಂದ ನೀರು ರೂಪಾಂತರ ಪಡೆಯುತ್ತಾ ಹೋಗುತ್ತದೆ. ಇಂತಹ ನೈಸರ್ಗಿಕ ಸಂಪನ್ಮೂಲ ಈಗ ಉದ್ಯಮ ಸ್ವರೂಪ ತಾಳಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಾ.ಆರ್.ವಿ.ಚಂದ್ರಶೇಖರ್.

ನೀರಿನ ಮಹತ್ವ: ನೀರು ಪ್ರಾಚೀನ ಕಾಲದಿಂದಲೂ ಕೆಲವರ ಭಕ್ತಿ ಮತ್ತು ಪರಿಶುದ್ಧತೆ ಅಭಿವ್ಯಕ್ತಿಯ ಸಂಕೇತವಾಗಿದೆ. ನಾಗರಿಕತೆ ಕೂಡ ಶುದ್ಧ ಕುಡಿಯುವ ನೀರಿನ ಸ್ಥಳ ಮತ್ತು ಲಭ್ಯತೆಗೆ ಅನುಗುಣವಾಗಿ ರೂಪುಗೊಂಡಿವೆ.

ಸಾಂಪ್ರದಾಯಿಕ ಮತ್ತು ಆಧುನಿಕ ಔಷಧದಲ್ಲಿ ನೀರು ಸರಳ ಮತ್ತು ಪರಿಣಾಮಕಾರಿ. ಬೆಚ್ಚಗಿನ ಸ್ನಾನ ಶಾಂತಗೊಳಿಸುವ ಗುಣ ಹೊಂದಿದ್ದರೆ, ತಣ್ಣೀರು ಸ್ನಾನ ಉತ್ತೇಜಕ ಗುಣ ಹೊಂದಿದೆ. ಶತಮಾನಗಳಿಂದಲೂ ಪ್ರಾಕೃತಿಕ ನೀರಿನ ಬುಗ್ಗೆಗಳೂ ಅಸ್ತಿತ್ವದಲ್ಲಿವೆ. ಇಂತಹ ಬಹುಪಯೋಗಿ ನೀರಿನ ಸಂರಕ್ಷಣೆ ಮುಖ್ಯ ಎಂಬುದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.