ADVERTISEMENT

ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಮಾತ್ರ ವಿನಿಯೋಗಿಸಿ: ಬಿಜೆಪಿ ಶಾಸಕ ಹರೀಶ್‌ ಪೂಂಜ

ಚರ್ಚೆಗೆ ಗ್ರಾಸವಾದ ಶಾಸಕ ಹರೀಶ್‌ ಪೂಂಜ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 5:56 IST
Last Updated 10 ಫೆಬ್ರುವರಿ 2024, 5:56 IST
ಹರೀಶ್‌ ಪೂಂಜ
ಹರೀಶ್‌ ಪೂಂಜ   

ಮಂಗಳೂರು: ‘ಹಿಂದೂಗಳು ಕಟ್ಟುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗವಾಗಬೇಕು. ಈ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ. ಹಿಂದೂಗಳ ತೆರಿಗೆ– ಹಿಂದೂಗಳ ಹಕ್ಕು’ ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.

ಈ ನೀತಿ ಈ ಆರ್ಥಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಅವರು ಬರೆದುಕೊಂಡಿದ್ದಾರೆ.

‘ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಮೂಲಕ ಕಾಂಗ್ರೆಸ್‌, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದೆ. ಆದರೆ, ಶಾಸಕ ಹರೀಶ್ ಪೂಂಜ ಅವರ ಉದ್ದೇಶ ಬೇರೇನೇ ಇದೆ. ನಾವು ಮಾತನಾಡುವ ವಿಷಯದಲ್ಲಿ ಸತ್ಯಾಂಶ ಇದ್ದು, ಪೂಂಜ ಒಪ್ಪಿಕೊಳ್ಳಲಿ. ಅದು ಬಿಟ್ಟು ಮೊಂಡು ವಾದ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹರೀಶ್ ಪೂಂಜ ಪೋಸ್ಟ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಈ ದೇಶ ರಾಮರಾಜ್ಯ ಆಗಬೇಕು, ಎಲ್ಲರಿಗೂ ಸಮಾನತೆ ಸಿಗಬೇಕು. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಎಲ್ಲವೂ ನಡೆಯಬೇಕು. ಈ ದೇಶದಲ್ಲಿ ಬಹು ಸಂಖ್ಯಾತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಕಟ್ಟುತ್ತಿದ್ದಾರೆ. ಹಿಂದೂಗಳ ತೆರಿಗೆ ಹಣ ಬಳಸಿ ಅಲ್ಪಸಂಖ್ಯಾತರಿಗೆ ಕೋಟಿ ಕೋಟಿ ಹಣ ನೀಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ₹ 10 ಸಾವಿರ ಕೋಟಿ  ಹಣವನ್ನು ಮುಸ್ಲಿಮರ ಅಭಿವೃದ್ಧಿಗೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ತೆರಿಗೆ ಹಣವನ್ನು ಎಲ್ಲರಿಗೂ ಒಂದೇ ರೀತಿ ಹಂಚಬೇಕು’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.