ADVERTISEMENT

ಅಕ್ರಮ ಡಿನೋಟಿಫೀಕೇಷನ್: ಕುಮಾರಸ್ವಾಮಿ ಓಡಾಟಕ್ಕೆ ಕೋರ್ಟ್ ನಿರ್ಬಂಧ

ಬಹಿರಂಗವಾಗಿ ಕಾಣಿಸಿಕೊಂಡರೆ ಬಂಧನ ವಾರೆಂಟ್: ‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 18:18 IST
Last Updated 1 ಏಪ್ರಿಲ್ 2021, 18:18 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ತಂದೆ, ತಾಯಿಗೆ ಕೋವಿಡ್‌ ಸೋಂಕು ತಗಲಿರುವುದರಿಂದ ಕ್ವಾರಂಟೈನ್‌ನಲ್ಲಿ ಇರುವುದಾಗಿ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಏಪ್ರಿಲ್‌ 17ರವರೆಗೂ ಬಹಿರಂಗವಾಗಿ ಕಾಣಿಸಿಕೊಂಡರೆ ಬಂಧನ ವಾರೆಂಟ್‌ ಜಾರಿಗೊಳಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಎಚ್ಚರಿಕೆ ನೀಡಿದೆ.

ನಗರದ ಹಲಗೇವಡೇರಹಳ್ಳಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನ 2 ಎಕರೆ 24 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೀಕೇಷನ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಯ ಎಂ. ಮಹಾದೇವಸ್ವಾಮಿ ಎಂಬುವವರು 2011ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಕುಮಾರಸ್ವಾಮಿ ಸತತ ಮೂರನೇ ಬಾರಿಗೆ ಗೈರಾಗಿದ್ದರು.

ಕುಮಾರಸ್ವಾಮಿ ಅವರ ತಂದೆ ಮತ್ತು ತಾಯಿಗೆ ಕೋವಿಡ್‌ ಸೋಂಕು ತಗುಲಿದೆ. ಆದ್ದರಿಂದ ಅವರೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು‌ ಎಂದು ಕೋರಿ ಕುಮಾರಸ್ವಾಮಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ADVERTISEMENT

‘ಕ್ವಾರಂಟೈನ್‌ನಲ್ಲಿ ಇದ್ದರೆ ನೀವು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ. ಕ್ವಾರಂಟೈನ್‌ ಅವಧಿ ಮುಗಿಯವವರೆಗೂ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿರುವುದು ಅಥವಾ ಬಹಿರಂಗವಾಗಿ ಓಡಾಡುತ್ತಿರುವುದು ಕಂಡುಬಂದರೆ ಬಂಧನ ವಾರೆಂಟ್‌ ಹೊರಡಿಸಲಾಗುವುದು’ ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಚಾರಣೆಗೆ ಸಮನ್ಸ್‌ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌, ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಖುದ್ದು ಹಾಜರಿಯಿಂದ ವಿನಾಯಿತಿ ನೀಡಬೇಕೆಂಬ ಕೋರಿಕೆಯನ್ನೂ ಮಾನ್ಯ ಮಾಡಿರಲಿಲ್ಲ.

ಬಳಿಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕುಮಾರಸ್ವಾಮಿ, ವಿಚಾರಣೆಗೆ ತಡೆ ನೀಡಲು ಮನವಿ ಮಾಡಿದ್ದರು. ಆದರೆ, ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿ ಕುಮಾರಸ್ವಾಮಿ ಅವರ ಅರ್ಜಿ ಇನ್ನೂ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.