ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಜಿಂಕೆ ಬೇಟೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 17:18 IST
Last Updated 30 ಮಾರ್ಚ್ 2020, 17:18 IST
ಮೃತ ಜಿಂಕೆ
ಮೃತ ಜಿಂಕೆ   

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಆನೇಕಲ್‌ ವಲಯದಲ್ಲಿ ದುಷ್ಕರ್ಮಿಯೊಬ್ಬರು ಸುಮಾರು ನಾಲ್ಕು ವರ್ಷ ಪ್ರಾಯದ ಹೆಣ್ಣು ಚುಕ್ಕಿ ಜಿಂಕೆಯೊಂದನ್ನು ಗುಂಡಿಕ್ಕಿ ಬೇಟೆಯಾಡಿದ್ದಾರೆ.

ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಧಾವಿಸಿದ್ದರಿಂದ ಬೇಟೆಗಾರ ಪರಾರಿಯಾಗಿದ್ದಾರೆ. ಅವರು ಜಿಂಕೆಯನ್ನು ಕೊಂಡೊಯ್ಯಲು ಸಾಧ್ಯವಾಗಿಲ್ಲ. ಸಿಬ್ಬಂದಿ ಸ್ಥಳಕ್ಕೆ ತೆರಳಿ ನೋಡಿದಾಗ ಜಿಂಕೆ ಮೃತಪಟ್ಟಿತ್ತು.

‘ಜಿಂಕೆಯನ್ನು ಕೊಂದ ಸ್ಥಳಕ್ಕೆ ಸಮೀಪದಲ್ಲೇ ಹಾರೋಹಳ್ಳಿ– ಆನೇಕಲ್‌ ರಸ್ತೆಯು ಉದ್ಯಾನದ ಮೂಲಕ ಹಾದು ಹೋಗುತ್ತದೆ. ಬೇಟೆಗಾರ ಈ ಮಾರ್ಗವಾಗಿ ಬಂದಿರುವ ಸಾಧ್ಯತೆ ಇದೆ’ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಕೊರೊನಾ ಸೋಂಕು ಹತೋಟಿಗೆ ತರುವ ಸಲುವಾಗಿ ಲಾಕ್‌ಡೌನ್‌ ಜಾರಿಯಾದ ಬಳಿಕ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿದೆ. ಹಾಗಾಗಿ ಕಾಡುಪ್ರಾಣಿಗಳು ರಸ್ತೆ ಬದಿಯಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಬೇಸಿಗೆಯ ಕಾವೇರುತ್ತಿರುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡ್ಗಿಚ್ಚು ತಡೆಯುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಕಾಡುಪ್ರಾಣಿಗಳ ಬೇಟೆಗೆ ಮುಂದಾಗುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳಿವೆ.

‘ಜಿಂಕೆಯನ್ನು ತುಪಾಕಿನಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ. ದುಷ್ಕರ್ಮಿಯ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ. ವನ್ಯಜೀವಿಗಳನ್ನು ಬೇಟೆಯಾಡುವವರನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದೊಡ್ಡಿಬೆಟ್ಟದ ಬಳಿ ಮತ್ತೆ ಬೆಂಕಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿರುವ ದೊಡ್ಡಿಬೆಟ್ಟದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

‘ರಾಷ್ಟ್ರೀಯ ಉದ್ಯಾನದ ಪಕ್ಕದ ಗೋಮಾಳ ಜಮೀನಿನಲ್ಲಿ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರಿಂದ ಮಾಹಿತಿ ಬಂದ ತಕ್ಷಣವೇ ಬೆಂಕಿ ನಂದಿಸುವ ಮೂಲಕ ಅದು ರಾಷ್ಟ್ರೀಯ ಉದ್ಯಾನದ ಕಾಡಿಗೆ ಹಬ್ಬದಂತೆ ತಡೆದಿದ್ದೇವೆ’ ಎಂದು ಹಾರೋಹಳ್ಳಿ ವಲಯ ಅರಣ್ಯ ಸಂರಕ್ಷಾಧಿಕಾರಿ ರಾಜ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಾಂಶಗಳು

ಲಾಕ್‌ಡೌನ್‌ ಬಳಿಕ ಕಾಡಿನಿಂದ ಹೊರಗೆ ಕಾಣಿಸಿಕೊಳ್ಳುತ್ತಿರುವ ಪ್ರಾಣಿಗಳು

ಬೆಂಕಿ ಹತೋಟಿಯಲ್ಲಿ ನಿರತರಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ

ಈ ಅವಕಾಶ ದುರ್ಬಳಕೆ ಮಾಡಿಕೊಳ್ಳುವ ಕಳ್ಳಬೇಟೆಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.