
ಬೆಂಗಳೂರು: ಕಗ್ಗಲೀಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಆರೋಪದಡಿ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಷನ್, ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.
‘ನನ್ನ ವಿರುದ್ಧ, ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್‌ಫೋರ್ಸ್ (ಬಿಎಂಟಿಎಫ್) ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಶ್ರೀಶ್ರೀ ರವಿಶಂಕರ ಗುರೂಜಿ (68) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಸಕದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಬೆಳ್ಳಿಯಪ್ಪ ಅರ್ಜಿಗೆ ಸಂಬಂಧಿಸಿದಂತೆ ಅಸಲು ದಾವೆಗಳ ಉಲ್ಲೇಖಗಳೂ ಸೇರಿದಂತೆ ಬೃಹತ್ ಕಡತಗಳ ಆಕ್ಷೇಪಣಾ ದಸ್ತಾವೇಜನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಶ್ರೀಶ್ರೀ ರವಿಶಂಕರ ಗುರೂಜಿ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 192 ಎ ಅಡಿಯಲ್ಲಿ ಬಿಎಂಟಿಎಫ್ ಎಫ್‌ಐಆರ್ ದಾಖಲಿಸಿದೆ. ರವಿಶಂಕರ ಗುರೂಜಿ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.