ADVERTISEMENT

ದಾಖಲೆ ಉತ್ತಮ ಪಡಿಸಿಕೊಂಡ ಶ್ರೀನಿವಾಸ ಗೌಡ

ಮಂಜೇಶ್ವರ ಪೈವಳಿಕೆ ‘ಅಣ್ಣ–ತಮ್ಮ’ ಜೋಡುಕರೆ ಕಂಬಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:31 IST
Last Updated 23 ಫೆಬ್ರುವರಿ 2020, 13:31 IST
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ   

ಮಂಗಳೂರು: ಇಲ್ಲಿಗೆ ಸಮೀಪದ ಮಂಜೇಶ್ವರದ ಪೈವಳಿಕೆಯಲ್ಲಿ ಭಾನುವಾರ ಮುಕ್ತಾಯಗೊಂಡ ‘ಅಣ್ಣ –ತಮ್ಮ’ ಜೋಡುಕರೆ ಕಂಬಳದಲ್ಲಿ ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ಅಶ್ವಥಪುರ ಶ್ರೀನಿವಾಸ ಗೌಡ ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ಆ ಮೂಲಕ ಒಂದೇ ಋತುವಿನಲ್ಲಿ 39 ಪದಕಗಳನ್ನು ಕೊರಳಿಗೇರಿಸಿಕೊಂಡರು. ಈ ಹಿಂದಿನ ವೇಣೂರು ಕಂಬಳದಲ್ಲಿ ಅವರು 35ನೇ ಪದಕ ಗೆದ್ದು, ದಾಖಲೆ ಬರೆದಿದ್ದರು.

ಅಲ್ಲದೇ, ಹಗ್ಗ ಕಿರಿಯ ವಿಭಾಗದಲ್ಲಿ ಒಂದೇ ಋತುವಿನಲ್ಲಿ ನಿರಂತರವಾಗಿ 13ನೇ ಚಿನ್ನ ಗೆಲ್ಲುವ ಮೂಲಕ ಬೆಳವಾಯಿ ಸದಾನಂದ ಶೆಟ್ಟಿ ಅವರ ಕೋಣವನ್ನು ಓಡಿಸಿದ್ದ ನಕ್ರೆ ಜಯಕರ ಮಡಿವಾಳರ ದಾಖಲೆಯನ್ನು ಸಮಬಲ ಮಾಡಿದರು. ಶ್ರೀನಿವಾಸ ಗೌಡ ಅವರುಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ್ದರು.ಈ ಋತುವಿನಲ್ಲಿ ಇನ್ನೂ ಎರಡು ಕಂಬಳಗಳು ನಡೆಯಲಿದ್ದು, ದಾಖಲೆ ಮುರಿಯುವ ಅವಕಾಶ ಶ್ರೀನಿವಾಸ ಗೌಡ ಮುಂದಿದೆ.

ADVERTISEMENT

ಈ ಕಂಬಳದಲ್ಲಿ ಶ್ರೀನಿವಾಸ ಗೌಡ, ಹಗ್ಗ ಕಿರಿಯ ಹಾಗೂ ನೇಗಿಲು ಕಿರಿಯದಲ್ಲಿ ಚಿನ್ನ ಮತ್ತು ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯದಲ್ಲಿ ಬೆಳ್ಳಿ ಸೇರಿ ನಾಲ್ಕು ಪದಕ ಗೆದ್ದಿದ್ದರು.

ನೇಗಿಲು ಹಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ ಹಕ್ಕೇರಿ ಸುರೇಶ್ ಶೆಟ್ಟಿ ಚಿನ್ನಕ್ಕೆ ಮುತ್ತಿಕ್ಕಿದರೆ, ಹಗ್ಗ ಹಿರಿಯ ವಿಭಾಗದಲ್ಲಿ ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ‘ಎ’ ಕೋಣಗಳನ್ನು ಓಡಿಸಿದ ಕೊಳಕೆ ಇರ್ವತ್ತೂರು ಆನಂದ್ ಮೊದಲಿಗರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.