ADVERTISEMENT

ಬಿಎಸ್‌ವೈ ಹೇಳಿದ್ದರಲ್ಲಿ ತಪ್ಪೇನಿದೆ?

ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:09 IST
Last Updated 4 ನವೆಂಬರ್ 2019, 19:09 IST
 ಶ್ರೀನಿವಾಸ ಪ್ರಸಾದ್‌ 
 ಶ್ರೀನಿವಾಸ ಪ್ರಸಾದ್‌    

ಚಾಮರಾಜನಗರ: ‘ವೈರಲ್‌ ಆಗಿರುವ ಧ್ವನಿ ಮುದ್ರಿಕೆಯಲ್ಲಿರುವುದು ‌ಮುಖ್ಯಮಂತ್ರಿ ಯಡಿಯೂರಪ್ಪ ಅವರ ಧ್ವನಿಯೇ ಅಲ್ಲವೇ ಎಂಬ ಜಿಜ್ಞಾಸೆ ಇದೆ. ಒಂದು ವೇಳೆ ಅವರದ್ದಾಗಿದ್ದರೂ ಅದರಲ್ಲಿ ತಪ್ಪೇನಿಲ್ಲ’ ಎಂದು ಸಂಸದ ಶ್ರೀನಿವಾಸ ಪ್ರಸಾದ್‌ ಸೋಮವಾರ ಇಲ್ಲಿ ಅಭಿಪ್ರಾಯ ಪಟ್ಟರು.

‘ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ತಮ್ಮ ಮನಸ್ಸಿನ ಭಾವನೆ ಹೇಳಿದ್ದಾರೆ. 16 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಸರ್ಕಾರ ಬಂದಿದೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮೊದಲ ಅತೃಪ್ತ ಶಾಸಕ: ‘ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಮೊದಲ ಅತೃಪ್ತಶಾಸಕರಾಗಿದ್ದರು’ ಎಂದು ವ್ಯಂಗ್ಯವಾಡಿದ ಅವರು, ‘ಸರ್ಕಾರದ ಬಗ್ಗೆ ಮೊದಲು ಅತೃಪ್ತಿ ಹೊರಹಾಕಿದ್ದೇ ಸಿದ್ದರಾಮಯ್ಯ. 15–20 ಪತ್ರಗಳನ್ನು ಬರೆದಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಕ್ಕೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದರು’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಕಾಡಿ ಬೇಡಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ಈಗ ಬೇರೆ ಯಾವುದೇ ವಿಷಯ ಸಿಗುತ್ತಿಲ್ಲ. ಹಾಗಾಗಿ, ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಧ್ವನಿಯ ತುಣುಕು ವೈರಲ್‌ ಆಗಿರುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ. ನುಚ್ಚು ನೂರಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.