ADVERTISEMENT

ಬಳ್ಳಾರಿ ಅಭಿವೃದ್ಧಿಗೆ ಅನುದಾನ: ಡಿಕೆಶಿ, ಶ್ರೀರಾಮುಲು ನಡುವೆ ಸವಾಲು!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 16:49 IST
Last Updated 24 ಅಕ್ಟೋಬರ್ 2018, 16:49 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿಗೆ ಯಾವ ಸರ್ಕಾರದ ಅವಧಿಯಲ್ಲಿ ಹೆಚ್ಚು ಅನುದಾನ ಬಂದಿದೆ ಎಂಬ ವಿಚಾರವು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನಡುವಿನ ಸವಾಲು ಮತ್ತು ಪ್ರತಿಸವಾಲಿಗೆ ದಾರಿ ಮಾಡಿದೆ. ಅದಕ್ಕೆ ಬುಧವಾರದ ವಾಲ್ಮೀಕಿ ಜಯಂತಿ ಸಾಕ್ಷಿಯಾಯಿತು.

ನಗರದ ಎಸ್ಪಿ ವೃತ್ತದಲ್ಲಿ ಬುಧವಾರ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ‘ಬಿಜೆಪಿಗಿಂತ ಕಾಂಗ್ರೆಸ್ ಒಂದು ರೂಪಾಯಿ ಹೆಚ್ಚಿನ ಅನುದಾನ ತಂದಿದ್ದರೂ ಜೆ.ಶಾಂತಾ ಅವರನ್ನು ಕಣದಿಂದ ವಾಪಸ್ ಪಡೆಯುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಉಗ್ರಪ್ಪನವರನ್ನು ಕಣದಿಂದ ವಾಪಸ್‌ ಪಡೆಯಬೇಕು’ ಎಂದು ಸವಾಲು ಹಾಕಿದರು.

‘ಜಿಲ್ಲೆಯ ಅಭಿವೃದ್ದಿಗೆ ರಾಮುಲು ಏನೂ ಮಾಡಿಲ್ಲ ಎನ್ನುವ ಕಾಂಗ್ರೆಸ್ ನಾಯಕರು ಚರ್ಚೆಗೆ ಬರಲಿ. ಕಾಂಗ್ರೆಸ್ ನಾಯಕರು ಎಷ್ಟು ಅನುದಾನ ತಂದಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ. ನಾವು ತಂದಿರುವ ಅನುದಾನದ ಬಗ್ಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧ’ ಎಂದರು.

ADVERTISEMENT

ಸವಾಲಿಗೆ ಸಿದ್ಧ: ನಂತರ ವಾಲ್ಮೀಕಿ ಪ್ರತಿಮೆ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಮಾಧ್ಯಮದವರೇ ಚರ್ಚೆ ಏರ್ಪಡಿಸಲಿ. ನಾನು ಬರಲು ಸಿದ್ಧ’ ಎಂದರು.

‘ಪರಿಶಿಷ್ಟ ಸಮುದಾಯಕ್ಕೆ ₹27 ಸಾವಿರ ಕೋಟಿ ಅನುದಾನ ನಿಗದಿಪಡಿಸಿರುವ ಏಕೈಕ ರಾಜ್ಯ ಕರ್ನಾಟಕ. ಅದು ಕಾಂಗ್ರೆಸ್‌ನಿಂದ ಸಾಧ್ಯವಾಗಿದೆ. ಆದರೆ ಶ್ರೀರಾಮುಲು ಅವರೇ ಅನುದಾನ ತಂದಿದ್ದಾರೆ, ಮಾಡಿದ್ದಾರೆ, ಇಟ್ಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಶ್ರೀರಾಮುಲು ಅಣ್ಣನವರು ಹುಟ್ಟಾ ಕಾಂಗ್ರೆಸ್ಸಿಗರು. ಸೋನಿಯಾ ಗಾಂಧಿ ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಶ್ರೀರಾಮುಲು ಅಣ್ಣ ಕಾಂಗ್ರೆಸ್ ಧ್ವಜ ಹಿಡಿದು ಬುಲೆಟ್‌ನಲ್ಲಿ ಓಡಾಡುವುದನ್ನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಅವರು ಕಾರ್ಪೊರೇಟರ್ ಕೂಡ ಆಗಿದ್ದರು’ ಎಂದರು.

ಕಮ್ಯುನಿಸ್ಟ್‌ ಬೆಂಬಲ: ‘ರಾಜ್ಯದ ಐದು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್‌ಗೆ ಸಹಕಾರ ನೀಡಲಿದೆ. ಸಿಪಿಐ(ಎಂ) ಜೊತೆಗೂ ಚರ್ಚಿಸಿದ್ದು ಅದರ ಬೆಂಬಲವನ್ನು ಕಾಂಗ್ರೆಸ್ ನಿರೀಕ್ಷಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.