ADVERTISEMENT

ಕನ್ನಡಿಗರ ಸಹನೆ ಕೆಣಕಬೇಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 21:00 IST
Last Updated 29 ಅಕ್ಟೋಬರ್ 2022, 21:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು (ಎಸ್‌ಎಸ್‌ಸಿ) ಭದ್ರತಾ ಪಡೆಗಳ ಸಿಬ್ಬಂದಿ ಆಯ್ಕೆಗೆ ನಡೆಸಲಿರುವ ಪರೀಕ್ಷೆಗೆ ಕನ್ನಡವನ್ನು ಕೈಬಿಡುವ ಮೂಲಕ ನಾಡಿನ ಯುವ ಸಮೂಹದ ಸಹನೆಯನ್ನು ಕೆಣಕುತ್ತಿದೆ. ಮತ್ತೆ ಮತ್ತೆ ಸಹನೆಯನ್ನು ಕೆಣಕುವ ಪಿತೂರಿ ಪಾಂಡಿತ್ಯವನ್ನು ಕೇಂದ್ರ ತಕ್ಷಣ ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೋಟಿ ಕಂಠಗಳಲ್ಲಿ ಕನ್ನಡ ಗೀತೆ ಹಾಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪ್ರತಿಯೊಬ್ಬ ಕನ್ನಡಿಗನಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು’ ಎಂದು ಭಾಷಣ ಮಾಡಿದ್ದರು. ವಾಸ್ತವವೇ ಬೇರೆಯಾಗಿದೆ. ಕನ್ನಡಿಗರ ಪಾಲಿನ ಉದ್ಯೋಗವನ್ನು ಕಿತ್ತುಕೊಂಡು ಸಾಮಾಜಿಕವಾಗಿ ಅಭದ್ರತೆ ಸೃಷ್ಟಿಸಿ, ಆರ್ಥಿಕ ಸ್ವಾವಲಂಬನೆಯ ಬೇರುಗಳನ್ನು ಕತ್ತರಿಸುವ ಕೆಲಸವನ್ನು ಕೇಂದ್ರ–ರಾಜ್ಯಗಳ ಡಬ್ಬಲ್‌ ಎಂಜಿನ್ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ತನ್ನ ಅಧಿಕಾರದ ದರ್ಪವನ್ನು ರಾಜ್ಯಗಳ ಪಾಲಿನ ಪರಮಾಧಿಕಾರವನ್ನು ಕಿತ್ತುಕೊಳ್ಳಲು ಬಳಸುತ್ತಿದೆ. ಒಂದು ಕಡೆ ಕೇಂದ್ರದ ಉದ್ಯೋಗಗಳು ಕನ್ನಡಿಗರು ಮತ್ತು ದಕ್ಷಿಣ ಭಾರತದ ರಾಜ್ಯಗಳ ಯುವ ಸಮೂಹದ ಕೈಗೆಟುಕದಂತೆ ಮಾಡುತ್ತಿದೆ.ಬ್ಯಾಂಕ್ ಹುದ್ದೆಗಳ ಪ್ರವೇಶ ಪರೀಕ್ಷೆಯಲ್ಲಿ ಕನ್ನಡದ ಕೊರಳು ಹಿಚುಕುತ್ತಿದ್ದ ಕೇಂದ್ರದ ನೀತಿ ವಿರುದ್ಧ ಕನ್ನಡ ನಾಡು ನಿರಂತರವಾಗಿ ಧ್ವನಿ ಎತ್ತಿ ತನ್ನ ಹಕ್ಕನ್ನು ಕಾಪಾಡಿಕೊಳ್ಳುತ್ತಿದೆ ಎನ್ನುವ ಹೊತ್ತಲ್ಲೇ ಇಂತಹ ಹತ್ತಾರು ದಾಳಿಗಳನ್ನು ನಾನಾ ರೀತಿಗಳಲ್ಲಿ ಕೇಂದ್ರ ಮುಂದುವರೆಸಿದೆ. ಕೇಂದ್ರ ಪಡೆಗಳಿಗೆ ಜನವರಿಯಲ್ಲಿ ನಡೆಯುತ್ತಿರುವ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವ ತೀರ್ಮಾನವನ್ನು ಕೇಂದ್ರ ತಕ್ಷಣ ಹಿಂದಕ್ಕೆ ಪಡೆದುಕೊಳ್ಳಬೇಕು. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.