ADVERTISEMENT

ಸುರಕ್ಷತಾ ಕ್ರಮದೊಂದಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ- ಸಚಿವ ಬಿ.ಸಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 19:31 IST
Last Updated 26 ಜನವರಿ 2022, 19:31 IST
ಬಿ.ಸಿ.ನಾಗೇಶ್‌
ಬಿ.ಸಿ.ನಾಗೇಶ್‌   

ಮಡಿಕೇರಿ: ‘ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಕೋವಿಡ್‌ ಸುರಕ್ಷತಾ ಕ್ರಮದೊಂದಿಗೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಇಲ್ಲಿ ಬುಧವಾರ ತಿಳಿಸಿದರು.

‘ವಿದ್ಯಾರ್ಥಿಗಳು ಆತಂಕ ಪಡದೆ, ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ಮಾರ್ಚ್‌ 28ರಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಲಿವೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಫೆಬ್ರುವರಿ ಮೊದಲ ವಾರದಿಂದ ಶಾಲೆ ಆರಂಭಿಸಲು ಚಿಂತಿಸಲಾಗಿದೆ. ಜ.28ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಹಿಜಾಬ್‌ಗೆ ಅನುಮತಿಗೆ ಕೋರಿ ಕರಾವಳಿಯಲ್ಲಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ವರದಿ ಸಲ್ಲಿಸುವವರೆಗೂ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿಯವರು ನಿಶ್ಚಯಿಸಿರುವ ಸಮವಸ್ತ್ರ ಧರಿಸಿಯೇ ಬರಬೇಕು. ಆರು ವಿದ್ಯಾರ್ಥಿಗಳು ಮಾತ್ರ ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎಂದು ಹಠ ಮಾಡುತ್ತಿದ್ದಾರೆ. ಆ ಸಮುದಾಯದ ಉಳಿದ 90 ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಬಂದಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ಸಂದೇಶದ ವೇಳೆ ಎಡವಟ್ಟು: ಗಣರಾಜ್ಯೋತ್ಸವದ ಸಂದೇಶ ಓದುವ ವೇಳೆ ಸಚಿವರು, ‘ಕೊಡಗು’ ಜಿಲ್ಲೆಯನ್ನು ‘ಕೊರಕು ಜಿಲ್ಲೆ’ ಎಂದು, ‘ದುರಸ್ತಿ’‌ ಎಂಬುದನ್ನು ‘ದುಃಸ್ಥಿತಿ’ ಎಂದೂ,‘ವಿತರಿಸಲಾಗಿದೆ’ ಎಂಬುದನ್ನು ‘ವಿಸ್ತರಿಸಲಾಗಿದೆ’ ಎಂದು ಓದಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರ ಹೆಸರು ಪ್ರಸ್ತಾಪಿಸುವಾಗಲೂ ‘ಮೀನಾ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.