ADVERTISEMENT

SSLC EXAMS | ಮಾರ್ಚ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 0:40 IST
Last Updated 24 ಮಾರ್ಚ್ 2024, 0:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸೋಮವಾರದಿಂದ (ಮಾರ್ಚ್‌–25) ಆರಂಭವಾಗುತ್ತಿದ್ದು, ಎಲ್ಲ 2,750 ಕೇಂದ್ರಗಳಲ್ಲೂ ಸಿದ್ಧತಾ ಕಾರ್ಯ ಪೂರ್ಣಗೊಂಡಿವೆ. 

ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಟೆಲಿಕಾಸ್ಟ್‌ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಅಳವಡಿಸಿದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಕುಳಿತು ಪರೀಕ್ಷಾ ಕೇಂದ್ರಗಳಲ್ಲಿನ ಚಲನವಲನ ವೀಕ್ಷಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.  

ADVERTISEMENT

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ ಗಳು ಗೋಡೆಗೆ ಮುಖ ಮಾಡಿಕೊಂಡು ಕುಳಿತು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೇಂದ್ರಗಳಲ್ಲೂ ಗೋಡೆಯ ಕಡೆ ಮುಖ ಮಾಡಿ ಕುಳಿತುಕೊಳ್ಳುವಂತೆ ಡೆಸ್ಕ್‌ಗಳನ್ನು ಜೋಡಿಸಲಾಗಿದೆ.

ಪರೀಕ್ಷೆಯ ಪ್ರಾರಂಭವಾದ 30 ನಿಮಿಷಗಳ ಒಳಗೆ ಬಂದರಷ್ಟೇ ಪರೀಕ್ಷಾ ಕೊಠಡಿಗೆ ಪ್ರವೇಶ ದೊರೆಯಲಿದೆ.  

ಆಯಾ ಜಿಲ್ಲೆಗಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರನ್ನು ಜಿಲ್ಲಾ ವೀಕ್ಷಕರಾಗಿ, ಉಪನ್ಯಾಸಕರನ್ನು ವಿಚಕ್ಷಣ ದಳದ ಅಧಿಕಾರಿಗಳಾಗಿ ನೇಮಿಸಲಾಗಿದೆ. ನಿರ್ದೇಶಕರು ಹಾಗೂ ಸಹ ನಿರ್ದೇಶಕ ವೃಂದದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯಕ್ಕೆ ಪ್ರೌಢಶಾಲಾ ಸಹಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಕ್ಲಸ್ಟರ್‌ ಹೊರತಾದ ಕೇಂದ್ರಗಳಿಗೆ ಮಾತ್ರ ಕೊಠಡಿ ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ. ಆಯಾ ವಿಷಯಗಳ ಶಿಕ್ಷಕರನ್ನು ಅದೇ ವಿಷಯದ ದಿನ ಪರೀಕ್ಷಾ ಕಾರ್ಯದಿಂದ ಹೊರಗಿಡಲಾಗಿದೆ. ಪರೀಕ್ಷೆಗಳು ಏಪ್ರಿಲ್ 6ಕ್ಕೆ ಮುಕ್ತಾಯವಾಗಲಿವೆ.

ಏಳು ಮಾಧ್ಯಮಗಳಲ್ಲಿ ಪರೀಕ್ಷೆ

ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ ಸೇರಿ ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳು ಹಾಗೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಇರುವುದಿಲ್ಲ.  ಇತರೆ ವಿದ್ಯಾರ್ಥಿಗಳಿಗೆ ಸಿದ್ಧಪಡಿಸುವ ಪ್ರಶ್ನೆಪತ್ರಿಕೆಗಳನ್ನೇ ಅವರಿಗೆ ನೀಡಲಾಗುತ್ತಿದೆ.  

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ

ಮಾರ್ಚ್‌ 25–ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌ (ಎನ್‌ಸಿಇ ಆರ್‌ಟಿ), ಸಂಸ್ಕೃತ, 27–ಸಮಾಜ ವಿಜ್ಞಾನ, 30–ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಏಪ್ರಿಲ್‌–2 ಗಣಿತ, 3–ಅರ್ಥಶಾಸ್ತ್ರ, ಎಂಜಿನಿಯರಿಂಗ್‌ ವಿಷಯಗಳು, 4–ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್‌ ವಿಷಯಗಳು, 6–ದ್ವಿತೀಯ ಭಾಷೆಗಳಾದ ಇಂಗ್ಲಿಷ್‌, ಕನ್ನಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.