ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಇನ್ನು ಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದಾರೆ.
ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗು ತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗು
ತ್ತಾರೆ. ಇದೇ ಮಾದರಿಯನ್ನು
ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಯನ್ನು125ಕ್ಕೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತದೆ. ಇದರಲ್ಲಿ ಪ್ರಥಮ ಭಾಷೆ 25 ಹಾಗೂ ಉಳಿದ ಇತರೆ ವಿಷಯಗಳಲ್ಲಿ ತಲಾ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಲಾಗಿದೆ. ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ.
35 ಅಂಕ ಕಡ್ಡಾಯ: ಈಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಲು ಶೇ 35 ಅಂಕಗಳನ್ನು ಪಡೆಯಬೇಕು.
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.
2026ರ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇತರೆ ಐದು ವಿಷಯಗಳಂತೆ ಕನ್ನಡಕ್ಕೂ 100 ಅಂಕ ಇರುತ್ತದೆ. ಒಟ್ಟಾರೆ ಅಂಕಗಳು 600 ಇರುತ್ತವೆ. ಇದುವರೆಗೂ 625 ಅಂಕಗಳು ಇದ್ದವು. ಪ್ರತಿ ವಿಷಯದಲ್ಲೂ
20 ಅಂಕ ಆಂತರಿಕ ಮೌಲ್ಯಮಾಪನ ಹಾಗೂ 80 ಅಂಕ ಲಿಖಿತ ಪರೀಕ್ಷೆ ಒಳ
ಗೊಂಡಿರುತ್ತದೆ. ನಿವೃತ್ತ ಪ್ರಾಧ್ಯಾಪಕ ಗಣೇಶ್ ಭಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿ ರುವ ಪರೀಕ್ಷೆ ಸುಧಾರಣಾ ಸಮಿತಿಯು, ಮುಂಬರುವ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಒಂದು ಅಂಕದ, ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು, ಪ್ರತಿ ವಿಭಾಗದಲ್ಲೂ ಹೆಚ್ಚು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಎರಡು, ಮೂರು, ನಾಲ್ಕು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲು ಸಮಿತಿ ಚರ್ಚೆ ನಡೆಸಿದೆ.
ಕೋವಿಡ್ ಅವಧಿಯಲ್ಲಿನ ಕಲಿಕಾ ನಷ್ಟ ಸರಿದೂಗಿಸಲು ಕೃಪಾಂಕ ನೀಡುವ ಪದ್ಧತಿ ಆರಂಭಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ 35 ಅಂಕ ಪಡೆದಿದ್ದು, ಉಳಿದ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಪ್ರತಿ ವಿಷಯದಲ್ಲೂ ಗರಿಷ್ಠ 10 ಕೃಪಾಂಕ ನೀಡಿ ತೇರ್ಗಡೆ ಮಾಡಲಾಗುತ್ತಿತ್ತು.
2024ರಲ್ಲಿ ವೆಬ್‌ಕಾಸ್ಟಿಂಗ್ ಪರಿಚಯಿಸಿದ ನಂತರ ಕೃಪಾಂಕ ಪಡೆಯಲು ಇದ್ದ ಶೇ 35 ಅರ್ಹ ಅಂಕಗಳನ್ನು 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಗಿತ್ತು. ಇದರಿಂದ ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿ ಗಳಲ್ಲಿ 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಆಧಾರದಲ್ಲೇ ತೇರ್ಗಡೆ ಯಾಗಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ 20 ಕೃಪಾಂಕ ಕೈಬಿಟ್ಟು, ಹಿಂದಿನಂತೆ 10 ಕೃಪಾಂಕ ಮುಂದುವರಿಸಲಾಗಿತ್ತು. ಮುಂಬರುವ ಪರೀಕ್ಷೆಯಲ್ಲಿ ಸಿಬಿಎಸ್‌ಇ ಮಾದರಿ ಅಳವಡಿಕೆಯಿಂದಾಗಿ ಕೃಪಾಂಕ ಪದ್ಧತಿ ಸಂಪೂರ್ಣ ಸ್ಥಗಿತವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.