ADVERTISEMENT

ಈ ಬಾರಿ ಮುಂಗಾರು ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮತ್ತೊಂದೆಡೆ ಕೋವಿಡ್ 19 ಭಯ, 27 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ

ಅದಿತ್ಯ ಕೆ.ಎ.
Published 10 ಜೂನ್ 2020, 8:44 IST
Last Updated 10 ಜೂನ್ 2020, 8:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ‘ನಿಗದಿಯಂತೆಯೇ ಜೂನ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದ್ದು ಕೊಡಗು ಜಿಲ್ಲೆಯಲ್ಲೂ ಪರೀಕ್ಷೆಗೆ ಸಿದ್ಧತೆಗಳು ಆರಂಭವಾಗಿವೆ. ಆದರೆ, ಜಿಲ್ಲೆಯ ಪೋಷಕರಲ್ಲೂ ಆತಂಕವಿದೆ. ಬರೀ ಕೋವಿಡ್ 19 ಭಯ ಮಾತ್ರವಲ್ಲ, ಮುಂಗಾರು ಮಳೆಯ ಆತಂಕವೂ ಶುರುವಾಗಿದೆ.

ರಾಜ್ಯದಲ್ಲೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಅದರಲ್ಲಿ ಒಂದು ಕೇಂದ್ರವನ್ನು ಮಾತ್ರ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಡಿಕೇರಿಯಲ್ಲಿ 8, ವಿರಾಜಪೇಟೆಯಲ್ಲಿ 8, ಸೋಮವಾರಪೇಟೆಯಲ್ಲಿ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದೇ ಮೊದಲ ಬಾರಿಗೆ ಮಳೆಗಾಲದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸವಾಲು ಎದುರಾಗಿದೆ. ಒಂದು ವೇಳೆ ಮಳೆ, ಗಾಳಿ ಬಿರುಸು ಪಡೆದರೆ, ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವುದು ಕಷ್ಟವಾಗಲಿದೆ. ಮಳೆಯ ನಡುವೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ವಿದ್ಯಾರ್ಥಿಗಳು ಬರಲು ಹೇಗೆ ಸಾಧ್ಯ? ಬಂದರೂ ಚಳಿಯ ನಡುವೆಯೇ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಳೆಗಾಲದಲ್ಲಿ ದಿಢೀರ್‌ ಹೊಳೆಗಳು, ನದಿ, ಹಳ್ಳ–ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆಯಿದೆ. ಪ್ರಾಕೃತಿಕ ವಿಕೋಪದಂಥ ಸವಾಲನ್ನೂ ಎದುರಿಸಬೇಕಿದೆ. ಜೂನ್‌ 11ರಿಂದ ಮಳೆ ಬಿರುಸು ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಅದನ್ನೂ ಗಮನದಲ್ಲಿ ಇಟ್ಟುಕೊಂಡು ಸಿದ್ಧತೆ ಕೈಗೊಳ್ಳಲಾಗಿದೆ.

ಜೂನ್‌, ಜುಲೈನಲ್ಲಿ ಮಳೆಗಾಲವಿರುವುದರಿಂದ ಕುಗ್ರಾಮದಂತಹ ಪ್ರದೇಶಗಳಿಂದ ಬರುವಂತಹ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪರೀಕ್ಷೆ ಮುಗಿಯುವವರೆಗೂ ಸಮೀಪದ ವಿದ್ಯಾರ್ಥಿ ನಿಲಯಗಳಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಆದೇಶಿಸಿದ್ದಾರೆ.


400 ಕೊಠಡಿ ಮೀಸಲು
ಮಡಿಕೇರಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೋವಿಡ್ 19 ದುಸ್ವಪ್ನವಾಗಿ ಕಾಡುತ್ತಿದೆ. ಜಿಲ್ಲೆಯ 400 ಕೊಠಡಿಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಹೆಚ್ಚುವರಿ ಕೊಠಡಿ ಮೀಸಲಿಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಜ್ವರ ಲಕ್ಷಣಗಳು ಕಂಡುಬಂದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗೊಂದಲ ಪರಿಹಾರಕ್ಕೆ ಸಹಾಯವಾಣಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇದೇ 25ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಯಾವುದೇ ಸಮಸ್ಯೆ ಹಾಗೂ ಗೊಂದಲಗಳಿದ್ದರೆ ಸಹಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ 08272 228337, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಡಿಕೇರಿ ಕಚೇರಿ 08272 225664, 9980669032, ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ 08276 282162, 9480423363, ಕ್ಷೇತ ಶಿಕ್ಷಣಾಧಿಕಾರಿ, ವಿರಾಜಪೇಟೆ 08274 257249, 9480309481 ಈ ಸಂಖ್ಯೆಗೆ ಕರೆ ಮಾಡಬಹುದು.

ಮುಂಜಾಗ್ರತಾ ಕ್ರಮಗಳು ಏನೇನು?
* ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ.
* ಪರೀಕ್ಷಾ ಅವಧಿಯಲ್ಲಿ ಕೆಎಸ್‍ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್‍ಗಳ ಸಂಚಾರಕ್ಕೆ ವ್ಯವಸ್ಥೆ.
* ನದಿ, ಹೊಳೆ ದಾಟಿ ಬರುವ ಗ್ರಾಮಗಳ ವಿದ್ಯಾರ್ಥಿಗಳು ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ.
* ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಸಲು ಕ್ರಮ.
* ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬೆಳಿಗ್ಗೆ 9ಕ್ಕೆ ಬರಬೇಕು.
* ಪರೀಕ್ಷೆ ಆರಂಭಕ್ಕೂ ಮುನ್ನ ಪ್ರತಿ ವಿದ್ಯಾರ್ಥಿಗಳಿಗೆ ಜ್ವರ ತಪಾಸಣೆ, ಹ್ಯಾಂಡ್ ಸ್ಯಾನಿಟೈಸರ್ ನೀಡಿ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ.
* ಪರೀಕ್ಷಾ ಪ್ರವೇಶ ಪತ್ರ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಣೆಗೂ ಕ್ರಮ.

ಜಿಲ್ಲೆಯಲ್ಲಿ ಜೂನ್, ಜುಲೈನಲ್ಲಿ ಪರೀಕ್ಷೆ ನಡೆಸುವುದು ದೊಡ್ಡ ಸವಾಲು. ಅಧಿಕಾರಿಗಳು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು.
– ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಧಿಕಾರಿ, ಕೊಡಗು

ಅಂಕಿಅಂಶಗಳು
**********
7,149 ಒಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು
3,562 ಬಾಲಕರು
3,587 ಬಾಲಕಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.