ADVERTISEMENT

ಈ ವರ್ಷದಿಂದ ಆನ್‌ಲೈನ್‌ನಲ್ಲಿ ಅಪ್‌ಡೇಟ್‌

ಎಸ್‌ಎಸ್‌ಎಲ್‌ಸಿ ಆಂತರಿಕ ಅಂಕ ನಿಗದಿಗೆ ಹೊಸ ವ್ಯವಸ್ಥೆ ಜಾರಿ : ಸುಮಂಗಲಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:25 IST
Last Updated 17 ಫೆಬ್ರುವರಿ 2019, 20:25 IST
ವಿ.ಸುಮಂಗಲಾ
ವಿ.ಸುಮಂಗಲಾ   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು (ಇಂಟರ್ನಲ್‌ ಅಸೆಸ್‌ಮೆಂಟ್‌) ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜಾರಿ ತಂದಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ಪ್ರಯತ್ನದ ಅಂಗವಾಗಿ ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡುವ ವ್ಯವಸ್ಥೆ ಜಾರಿ ಮಾಡಿರುವುದಾಗಿ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಆಂತರಿಕ ಅಂಕಗಳನ್ನು ಸಿದ್ಧಪಡಿಸುವುದಕ್ಕೆ ಶಿಕ್ಷಕರಿಗೆ ಬಹಳ ಸಮಯ ಬೇಕಾಗುತ್ತಿತ್ತು. ಹೊಸ ವ್ಯವಸ್ಥೆಯಿಂದ ಪ್ರತಿ ವಿದ್ಯಾರ್ಥಿಯ ಅಂಕಗಳನ್ನು ಕನಿಷ್ಠ 3 ನಿಮಿಷ, ಗರಿಷ್ಠ 7 ನಿಮಿಷದೊಳಗೆ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಬಹುದಾಗಿದೆ. ಈ ಪ್ರಕ್ರಿಯೆ ಅತ್ಯಂತ ಸರಳವಾಗಿದ್ದು, ಯಾವುದೇ ರೀತಿಯಲ್ಲಿ ದುರ್ಬಳಕೆಗೆ ಅವಕಾಶ ಆಗದಂತೆ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಅಪ್‌ಡೇಟ್‌ ಪ್ರಕ್ರಿಯೆ ಹೀಗಿದೆ: ಶಾಲಾ ಮುಖ್ಯಸ್ಥರು ಪರೀಕ್ಷಾ ಮಂಡಳಿ ತಂತ್ರಾಂಶ http://www.kseeb.nic.in ಮೂಲಕ ಲಾಗ್‌ಇನ್‌ ಆಗಿ ಆಂತರಿಕ ಅಂಕಗಳನ್ನು ಎಂಟ್ರಿ ವಿಭಾಗವನ್ನು ಕ್ಲಿಕ್‌ ಮಾಡಬೇಕು. ವೆಬ್‌ಪೇಜ್‌ನಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯನ್ನು ನಮೂದಿಸಿದಾಗ ಆ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅನಾವರಣಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿ ಭಾವಚಿತ್ರ, ಸಹಿ ಸಹಿತ ಎಲ್ಲ ವಿವರಗಳನ್ನೂ ಕಾಣಿಸುವುದರಿಂದ ಶಿಕ್ಷಕರು ಮತ್ತೊಮ್ಮೆ ತಾವು ನೀಡುತ್ತಿರುವ ಅಂಕಗಳು ನಿರ್ದಿಷ್ಟ ವ್ಯಕ್ತಿಯದೇ ಎಂದು ಖಚಿತಪಡಿಸಿಕೊಳ್ಳಬಹುದು. ಇದರಿಂದ ಒಬ್ಬ ವಿದ್ಯಾರ್ಥಿಯ ಅಂಕ ಬೇರೊಬ್ಬ ವಿದ್ಯಾರ್ಥಿಗೆ ತಪ್ಪಾಗಿ ನಮೂದಿಸುವ ಅವಕಾಶ ಇರುವುದಿಲ್ಲ. ಹೈಡ್‌ ಕ್ಯಾಂಡಿಡೇಟ್‌ ಬಟನ್‌ ಸಹ ಬಳಸಬಹುದು ಎಂದರು.

ವಿದ್ಯಾರ್ಥಿಯು ತೆಗೆದುಕೊಂಡಿರುವ ಭಾಷೆ ಮತ್ತು ವಿಷಯಗಳು ಹಾಗೂ ತಂತ್ರಾಂಶದಲ್ಲಿ ಕಾಣಿಸಿರುವ ವಿಷಯಗಳು ಸರಿಯಾಗಿವೆಯೇ ಎಂಬುದನ್ನು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು. ಬಳಿಕ ಆಯಾ ಭಾಷೆ ಮತ್ತು ವಿಷಯಗಳಿಗೆ ಅನುಸಾರವಾಗಿ ಆಂತರಿಕ ಅಂಕಗಳನ್ನು ನಮೂದಿಸಿ ಸೇವ್ ಮಾಡಬೇಕು ಎಂದು ಸುಮಂಗಲಾ ಹೇಳಿದರು.

ಅಂಗವಿಕಲ ವಿದ್ಯಾರ್ಥಿಗಳಿಗೆ ವಿನಾಯ್ತಿ

ಅಂಗವಿಕಲ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳಿಗೆ ವಿನಾಯಿತಿ ನೀಡಲಾಗಿದೆ. ಈ ವಿಷಯಗಳಿಗೆ ಆಂತರಿಕ ಅಂಕಗಳನ್ನು ನಮೂದಿಸುವ ಅಗತ್ಯವಿಲ್ಲ. ಕೆಲವು ಪ್ರಕರಣಗಳಲ್ಲಿ ಪರ್ಯಾಯ ಕೋರ್‌ ವಿಷಯಗಳನ್ನು ಬರೆಯಲು ಅನುಮತಿ ನೀಡಲಾಗಿದೆ. ಈ ವಿಷಯಗಳಿಗೆ ಸಂಬಂಧಿಸಿದ ಆಂತರಿಕ ಅಂಕಗಳನ್ನು ನಮೂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.