ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಚಿಕ್ಕೋಡಿಗೆ ‘ಬಿ’, ಬೆಳಗಾವಿಗೆ ‘ಸಿ’ ಗ್ರೇಡ್

ಕನ್ನಡ ಮಾಧ್ಯಮದಲ್ಲಿ ಇಬ್ಬರು ರಾಜ್ಯದ ಟಾಪರ್‌ಗಳು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 13:18 IST
Last Updated 10 ಆಗಸ್ಟ್ 2020, 13:18 IST

ಬೆಳಗಾವಿ: ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ‘ಬಿ’ ಗ್ರೇಡ್ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯು ‘ಸಿ’ ಗ್ರೇಡ್ ಗಳಿಸಿದೆ.

ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಾರ ನಿಗದಿಯಾಗಿದ್ದ ಪರೀಕ್ಷೆಯನ್ನು ಕೋವಿಡ್–19 ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು. ಬಳಿಕ ಜೂನ್‌ ಕೊನೆಯ ವಾರದಲ್ಲಿ, ಕೊರೊನಾ ಸೋಂಕಿನ ಆತಂಕದ ನಡುವೆಯೂ ‍ಪರೀಕ್ಷೆ ನಡೆದಿತ್ತು. ಈ ಬಾರಿ ಜಿಲ್ಲೆಗಳು ಪಡೆದಿರುವ ಅಂಕಗಳನ್ನು ಆಧರಿಸಿ ‘ಗ್ರೇಡ್‌’ ಕೊಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

2018-19ನೇ ಸಾಲಿನ ಪರೀಕ್ಷೆಯಲ್ಲಿ ಶೇ 77.43 ಫಲಿತಾಂಶದೊಂದಿಗೆ 24ನೇ ಸ್ಥಾನ ಗಳಿಸಿದ್ದ ಬೆಳಗಾವಿ ಈ ಬಾರಿ ‘ಸಿ’ ಗ್ರೇಡ್‌ಗೆ ಕುಸಿದಿದೆ. ಕಳೆದ ಸಾಲಿನ ಪರೀಕ್ಷೆಯಲ್ಲಿ ಶೇ 84.09 ಫಲಿತಾಂಶದೊಂದಿಗೆ 13ನೇ ಸ್ಥಾನ ಪಡೆದಿದ್ದ ಚಿಕ್ಕೋಡಿ ಈ ಬಾರಿ ‘ಬಿ’ ಗ್ರೇಡ್‌ನಲ್ಲಿದೆ.

ADVERTISEMENT

ಬೆಳಗಾವಿಯಲ್ಲಿ 33,180 ಹಾಗೂ ಚಿಕ್ಕೋಡಿಯಲ್ಲಿ 40,834 ಸೇರಿ ಒಟ್ಟು 74,014 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು.

ನಾಲ್ವರ ಸಾಧನೆ:ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯ ನಾಲ್ವರು ಅತ್ಯುತ್ತಮ ಸಾಧನೆ ತೋರಿದ್ದಾರೆ. ಇವರಲ್ಲಿ ಮೂವರು ವಿದ್ಯಾರ್ಥಿನಿಯರು ಆಗಿರುವುದು ವಿಶೇಷ. ಫಲಿತಾಂಶ ಪಟ್ಟಿ ಗಮನಿಸಿದರೆ, ಬೆಳಗಾವಿ ನಗರದ ಶಾಲೆಗಳ ವಿದ್ಯಾರ್ಥಿಗಳಿಗಿಂತಲೂ ಗ್ರಾಮಾಂತರ ಪ್ರದೇಶದವರು ಹೆಚ್ಚಿನ ಅಂಕ ಗಳಿಸಿ ಮಿಂಚಿರುವುದು ಈ ಸಾಲಿನ ಮತ್ತೊಂದು ವಿಶೇಷವಾಗಿದೆ.

ಚಿಕ್ಕೋಡಿಯ ಎಂ.ಕೆ. ಕವಟಗಿಮಠ ಪ್ರೌಢಶಾಲೆ ವಿದ್ಯಾರ್ಥಿನಿ ಸಹನಾ ಕಾಮಗೌಡರ, ಗೋಕಾಕ ತಾಲ್ಲೂಕಿನ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರುತಿ ಪಾಟೀಲ ತಲಾ 623 ಅಂಕ ಗಳಿಸಿ, ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಉಡಿಕೇರಿಯ ಎಸ್.ಆರ್. ಪ್ರೌಢಶಾಲೆ ವಿದ್ಯಾರ್ಥಿ ವೀರಭದ್ರ ಕಲಭಾವಿ, ರಾಯಬಾಗ ತಾಲ್ಲೂಕಿನ ಹಾರೂಗೇರಿಯ ಪ್ರಗತಿ ಪ್ರೌಢಶಾಲೆ ವಿದ್ಯಾರ್ಥಿನಿ ದೀಪಾ ನಾಗನೂರ ತಲಾ 622 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವಲಯವಾರು ಫಲಿತಾಂಶದಲ್ಲಿ ಬೆಳಗಾವಿ ಗ್ರಾಮೀಣ, ರಾಮದುರ್ಗ ಹಾಗೂ ಬೈಲಹೊಂಗಲ ‘ಬಿ’ ಗ್ರೇಡ್‌ ಪಡೆದಿವೆ. ಬೆಳಗಾವಿ ನಗರ, ಚನ್ನಮ್ಮನ ಕಿತ್ತೂರು, ಸವದತ್ತಿ ಹಾಗೂ ಖಾನಾಪುರ ವಲಯಗಳು ‘ಸಿ’ ಗ್ರೇಡ್ ಪಡೆದಿವೆ. ನಗರದ ಬೆನನ್‌ಸ್ಮಿತ್‌ ಸಂಯುಕ್ತ ಪಿಯು ಕಾಲೇಜು ಮತ್ತು ಪಂಡಿತ್‌ ನೆಹರೂ ಸಂಯುಕ್ತ ಪಿಯು ಕಾಲೇಜು ಶೂನ್ಯ ಫಲಿತಾಂಶ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.