ADVERTISEMENT

ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನ ಶುಲ್ಕ ದುಬಾರಿ; ಪೋಷಕರ ಅಳಲು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 19:32 IST
Last Updated 15 ಆಗಸ್ಟ್ 2020, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನ ಶುಲ್ಕದ ಮೊತ್ತ ಜಾಸ್ತಿ ಆಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಈ ಶುಲ್ಕ ಕಟ್ಟಲೂ ಹಣವಿಲ್ಲ’ ಎಂದು ಹಲವು ಪೋಷಕರು ಅಳಲು ತೋಡಿಕೊಂಡಿದ್ದಾರೆ.

‘ಒಂದು ವಿಷಯದ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ₹405, ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ ₹805 ಒಟ್ಟು ₹1,210 ಪಾವತಿಸಬೇಕು. ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಯೋಚಿಸುವಂತಾಗಿದೆ’ ಎನ್ನುವ ಪೋಷಕರೊಬ್ಬರು, ‘ಮರುಮೌಲ್ಯಮಾಪನದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಬಂದರೆ ಮಾತ್ರ ಶುಲ್ಕ ಮರುಪಾವತಿ ಮಾಡುತ್ತಾರೆ. ಒಂದೆರಡು ಅಂಕಗಳು ಬಂದರೆ ಮರುಪಾವತಿ ಇಲ್ಲ’ ಎಂದರು.

‘ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೂ ಸೆಪ್ಟೆಂಬರ್‌ನಲ್ಲಿ ನಡೆಯುವ ಪೂರಕ ಪರೀಕ್ಷೆ ತೆಗೆದುಕೊಳ್ಳಲೇಬೇಕು. ಪ್ರತಿ ವಿಷಯಕ್ಕೆ ₹300 ಶುಲ್ಕ ಇದೆ. ಹೆಚ್ಚು ಹೊರೆಯಾಗುತ್ತಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಮರುಮೌಲ್ಯಮಾಪನ ಶುಲ್ಕ ಕಳೆದ ವರ್ಷ ಎಷ್ಟಿತ್ತೋ, ಅಷ್ಟೇ ಇದೆ. 8.5 ಲಕ್ಷ ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ವೇಳೆ ಸಣ್ಣ–ಪುಟ್ಟ ದೋಷಗಳಾಗಿರಬಹುದು’ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.

‘ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಎಷ್ಟೋ ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಲವು ಹಂತಗಳಲ್ಲಿ ಪರಿಶೀಲನೆ ನಡೆಸಿದ ನಂತರವೇ ಮೌಲ್ಯಮಾಪನ ಅಂತಿಮಗೊಳಿಸಿರಲಾಗುತ್ತದೆ’ ಎಂದರು. ಉತ್ತರಪತ್ರಿಕೆಗಳ ನಕಲು ಪ್ರತಿ ಪಡೆಯಲು ಆ.21, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆ. 24 ಕೊನೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.