ADVERTISEMENT

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: 46,270 ವಿದ್ಯಾರ್ಥಿಗಳು ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 15:57 IST
Last Updated 30 ಜೂನ್ 2023, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ1.11 ಲಕ್ಷ ವಿದ್ಯಾರ್ಥಿಗಳಲ್ಲಿ 46,270 ಮಂದಿ (ಶೇ 41.39) ಉತ್ತೀರ್ಣರಾಗಿದ್ದಾರೆ. 

ಮುಖ್ಯ ಪರೀಕ್ಷೆಯಂತೆ ಪೂರಕ ಪರೀಕ್ಷೆಯಲ್ಲೂ ಗ್ರಾಮೀಣರೇ (42.66) ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 40.3ರಷ್ಟಿದೆ. ಈ ಬಾರಿಯೂ ಬಾಲಕಿಯರೇ (ಶೇ 45.67) ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ 38.95ರಷ್ಟು ಬಾಲಕರು ಮರುಪ್ರಯತ್ನದಲ್ಲಿ ಯಶ ಕಂಡಿದ್ದಾರೆ. ಕನ್ನಡ ಮಾಧ್ಯಮದವರಿಗಿಂತ (ಶೇ 40.78), ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು (ಶೇ 41.15) ತುಸು ಹೆಚ್ಚಿನ ಸಾಧನೆ ತೋರಿದ್ದಾರೆ. 

ಅನುದಾನಿತ ಶಾಲೆಯ ವಿದ್ಯಾರ್ಥಿಗಳು (ಶೇ 43.16) ಖಾಸಗಿ (42.34) ಮತ್ತು ಸರ್ಕಾರಿ (39.78) ಶಾಲೆಯ ವಿದ್ಯಾರ್ಥಿಗಳಿಗಿಂತ ಮುಂದಿದ್ದಾರೆ. ಶೇ 75ರಷ್ಟು ಹಾಜರಾತಿ ಕೊರತೆಯಿಂದ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 2020 ವಿದ್ಯಾರ್ಥಿಗಳಲ್ಲಿ 108 (ಶೇ 5.35) ಮಂದಿ ತೇರ್ಗಡೆಯಾಗಿದ್ದಾರೆ.

ADVERTISEMENT

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಜೂನ್‌ 12ರಿಂದ 19ರವರೆಗೆ ಪೂರಕ ಪರೀಕ್ಷೆ ನಡೆಸಿತ್ತು. 9 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆದಿತ್ತು. ಸುಮಾರು 10 ಸಾವಿರ ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸಿದ್ದರು. ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.