ADVERTISEMENT

ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ನಿರ್ಣಯ ಕೈಗೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 10:15 IST
Last Updated 11 ಡಿಸೆಂಬರ್ 2020, 10:15 IST

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ.) ಪಟ್ಟಿಗೆ ಸೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕಾಂಗ್ರೆಸ್‌ ಶಾಸಕರಾದ ರಾಘವೇಂದ್ರ ಹಿಟ್ನಾಳ್‌, ಬೈರತಿ ಸುರೇಶ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಕುಸುಮಾ ಶಿವಳ್ಳಿ ಮತ್ತು ಮಾಜಿ ಸಚಿವ ಕೃಷ್ಣಪ್ಪ ಆಗ್ರಹಿಸಿದರು.

ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಗೊಂಡ ಮತ್ತು ರಾಜಗೊಂಡ ಸಮುದಾಯಗಳನ್ನು ಎಸ್‌.ಟಿ. ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿಯ ಹೋಲಿಕೆ ಇರುವ ಕುರುಬ ಮತ್ತು ಹಾಲುಮತ ಸಮುದಾಯಗಳನ್ನು ಎಸ್‌.ಟಿ. ಪಟ್ಟಿಗೆ ಸೇರಿಸುವಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈಗ ಮತ್ತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಕೇಂದ್ರದ ಮೇಲೆ ಒತ್ತಡ ತರಬೇಕು‘ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸಚಿವರಾಗಿರುವ ಕೆ.ಎಸ್‌. ಈಶ್ವರಪ್ಪ ಅವರೇ ಹೋರಾಟದ ನೇತೃತ್ವ ವಹಿಸಲಿ. ಸಮುದಾಯದ ಎಲ್ಲ ಶಾಸಕರು ಮತ್ತು ಜನಪ್ರತಿನಿಧಿಗಳು ಬೆಂಬಲ ನೀಡಲು ಸಿದ್ಧ. ಈ ಹೋರಾಟ ರಾಜ್ಯ ಸರ್ಕಾರದ ವಿರುದ್ಧವೋ ಅಥವಾ ಕೇಂದ್ರ ಸರ್ಕಾರದ ವಿರುದ್ಧವೋ ಎಂಬುದನ್ನು ಈಶ್ವರಪ್ಪ ಅವರು ಸ್ಪಷ್ಟಪಡಿಸಬೇಕು. ಹೋರಾಟವನ್ನು ಸಮಾವೇಶಗಳಿಗೆ ಸೀಮಿತಗೊಳಿಸದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕು ಎಂದರು.

ADVERTISEMENT

ಹಿಂದೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಶಿಫಾರಸಿನ ಕುರಿತು ಈಶ್ವರಪ್ಪ ಅವರಾಗಲೀ ಅಥವಾ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಾಗಲೀ ಧ್ವನಿ ಎತ್ತುತ್ತಿಲ್ಲ. ಈ ವಿಚಾರದಲ್ಲಿ ಮತ್ತೆ ನಿರ್ಣಯ ಕೈಗೊಳ್ಳುವ ಮೂಲಕ ಸಮುದಾಯದ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.