ADVERTISEMENT

ಕಾಲ್ತುಳಿತ ಪ್ರಕರಣ: ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಆರ್‌ಸಿಬಿ–ಡಿಎನ್‌ಎ ಪದಾಧಿಕಾರಿಗಳ ಬಿಡುಗಡೆ ಕೋರಿಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:07 IST
Last Updated 11 ಜೂನ್ 2025, 16:07 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವು ಕಂಡ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ ಆರ್‌ಸಿಬಿ ಮತ್ತು ಡಿಎನ್‌ಎ ಪದಾಧಿಕಾರಿಗಳು ಸಲ್ಲಿಸಿರುವ ಅರ್ಜಿಯ ಮೇಲಿನ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಪರ ಅವರ ಪತ್ನಿ ಮಾಳವಿಕಾ ನಾಯಕ್‌, ಮೆಸರ್ಸ್‌ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಿರ್ದೇಶಕ ಆರ್‌.ಸುನಿಲ್‌ ಮ್ಯಾಥ್ಯೂ ಪರವಾಗಿ ಅವರ ಪತ್ನಿ ರೋಶನಿ ಸುನಿಲ್‌, ಎಸ್‌.ಕಿರಣ್‌ ಕುಮಾರ್‌ ಪರವಾಗಿ ಅವರ ಪತ್ನಿ ಕೆ.ನಂದಿನಿ ಮತ್ತು ಎನ್‌.ಪಿ.ಶಮಂತ್‌ ಅವರ ತಾಯಿ ನಿರ್ಮಲಾ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರು, ‘ಆರ್‌ಸಿಬಿ ಮತ್ತು ಡಿಎನ್‌ಎ ಅಂದು ಜನಸಂದಣಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ. ತಮ್ಮ ಕಂಪನಿಗಳ ಪ್ರಚಾರಕ್ಕಾಗಿ, ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಲು ಇವರೆಲ್ಲಾ ಜನರ ಪ್ರಾಣಕ್ಕೆ ಕುತ್ತು ತಂದಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ನಿಖಿಲ್‌ ಸೋಸಲೆ ಪಲಾಯನ ಮಾಡಲು ಯತ್ನಿಸಿದಾಗ ಬಂಧಿಸಲಾಗಿದೆ. ಅವರು ಜೂನ್‌ 5ರ ರಾತ್ರಿ 10.56ಕ್ಕೆ ವಿಮಾನದ ಟಿಕೆಟ್‌ ಕಾಯ್ದಿರಿಸಿ, ಬೆಳಗಿನ ಜಾವ 4.30ಕ್ಕೆ ವಿಮಾನ ನಿಲ್ದಾಣದಲ್ಲಿದ್ದಾಗ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ನಿಖಿಲ್‌ ಸೋಸಲೆಯನ್ನು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್‌ ರವಿ ಬಂಧಿಸಿದ್ದಾರೆಯೇ ಹೊರತು ಸಿಸಿಬಿ ಅಧಿಕಾರಿಗಳಲ್ಲ’ ಎಂದರು.

‘ಬಂಧಿತರೆಲ್ಲರಿಗೂ 10 ಗಂಟೆಯ ಒಳಗೆಯೇ ಬಂಧನದ ಸೂಚನೆ, ಕಾರಣ, ಆಧಾರ ಸೇರಿದಂತೆ ಎಲ್ಲ ದಾಖಲೆಗಳನ್ನು ಒದಗಿಸುವ ಮೂಲಕ ಕಾನೂನಾತ್ಮಕ ನಡೆಯನ್ನು ಚಾಚೂ ತಪ್ಪದೆ ಅನುಸರಿಸಲಾಗಿದೆ. ಬಂಧನದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಆದ್ದರಿಂದ, ಅರ್ಜಿದಾರರ ಬಿಡುಗಡೆಗೆ ಆದೇಶ ಮಾಡಬಾರದು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ, ‘ಮುಖ್ಯಮಂತ್ರಿ ಸೂಚನೆ ಮೇರೆಗೆ ಅರ್ಜಿದಾರರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂಬುದನ್ನು ಅಡ್ವೊಕೇಟ್‌ ಜನರಲ್ ಎಲ್ಲೂ ನಿರಾಕರಿಸಿಲ್ಲ. ಬಂಧಿಸುವಾಗಲೇ ಬಂಧನದ ಕಾರಣ ನೀಡಬೇಕು. ಆದರೆ, ನೀಡಿಲ್ಲ. ಹೀಗಾಗಿ, ಬಂಧನ ಕಾನೂನುಬಾಹಿರ’ ಎಂದು ಪ್ರತಿಪಾದಿಸಿದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ಗುರುವಾರ (ಜೂನ್‌ 12) ಪ್ರಕಟಿಸುವುದಾಗಿ ತಿಳಿಸಿತು.

ಆಹ್ವಾನ ನೀಡಿದ್ದು ಸಿಎಂ–ಡಿಸಿಎಂ

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ‘ವಿಜಯೋತ್ಸವ ಆಚರಣೆ ಮಾಡುತ್ತೇವೆ ಬನ್ನಿ ಎಂದು ಮುಖ್ಯಮಂತ್ರಿ (ಸಿಎಂ) ಹಾಗೂ ಉಪಮುಖ್ಯಮಂತ್ರಿ (ಡಿಸಿಎಂ) ಸಾರ್ವಜನಿಕರನ್ನು ಮುಕ್ತವಾಗಿ ಆಹ್ವಾನಿಸಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿದರು.

‘ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಕೈಬಿಡಲಾಗಿದೆ. ಇವರಲ್ಲಿ ಯಾರನ್ನೂ ಬಂಧಿಸಿಲ್ಲ’ ಎಂದು ದೂರಿದರು.

ಇದನ್ನು ಬಲವಾಗಿ ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ‘ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಆಚರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಆರ್‌ಸಿಬಿ ಟ್ವೀಟ್‌ ಮಾಡಿದೆ. ಆದರೆ ಇದಕ್ಕೆ ಸಕ್ಷಮ ಪ್ರಾಧಿಕಾರದಿಂದ ಸೂಕ್ತ ಅನುಮತಿ ಪಡೆದಿರಲಿಲ್ಲ. ಅಂದು ಮಧ್ಯಾಹ್ನ ಕ್ರೀಡಾಂಗಣದ ಮುಂಭಾಗ ಅಂದಾಜು 4 ಲಕ್ಷ ಜನ ನೆರೆದಿದ್ದರೂ 21 ಗೇಟ್‌ಗಳ ಪೈಕಿ ಕೇವಲ 3 ಗೇಟ್‌ಗಳನ್ನು ಮಾತ್ರ ತೆರೆಯಲಾಗಿತ್ತು. ಆದ್ದರಿಂದ ದುರ್ಘಟನೆಗೆ ಆರ್‌ಸಿಬಿ ಡಿಎನ್‌ಎ ಮತ್ತು ಕೆಎಸ್‌ಸಿಎ ಕಾರಣ’ ಎಂದು ಪ್ರತಿಯಾಗಿ ದೂರಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.