ಶಿವಮೊಗ್ಗ: ಬೆಂಗಳೂರಿನಲ್ಲಿ ಆರ್ ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ರಾಜ್ಯ ಸರ್ಕಾರದ ನೀಚತನದ ಪರಮಾವಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರು ಹಾಗೂ ಕಾಲ್ತುಳಿತದಲ್ಲಿ ಸಾವಿಗೀಡಾದವರ ಕುಟುಂಬದವರ ಕ್ಷಮೆ ಕೇಳಬೇಕು. ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಗಳ ಮನೆಯವರು ಸತ್ತರೆ ಮಾತ್ರ ಸಾವಿನ ಅನುಭವವಾಗುತ್ತದೆ. ಜನಸಾಮಾನ್ಯರ ಸಾವಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯದ ಫಲ ಈ ದುರ್ಘಟನೆ. ನಾಡಿಗೆ ಒಬ್ಬ ಅಸಮರ್ಥ ಮಾರ್ಗದರ್ಶಕ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತಮ್ಮ ಸ್ಥಾನದ ಘನತೆ ಮರೆತು ವರ್ತಿಸಿದರು. ವಿಧಾನಸೌಧದ ಮುಂದೆ ಹಾಕಿದ್ದ ವೇದಿಕೆಯಲ್ಲೇ ಸಾವಿರ ಮಂದಿ ಇದ್ದರು. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು, ಕುಟುಂಬದವರು, ಹಿರಿಯ ಪೊಲೀಸ್ ಅಧಿಕಾರಿಗಳು ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದದ್ದು ನಾಚಿಕೆಗೇಡು. ಅಷ್ಟಕ್ಕೂ ಅದು ದೇಶವನ್ನು ಪ್ರತಿನಿಧಿಸಿದ್ದ ತಂಡವಲ್ಲ. ರಣಜಿ ಟ್ರೋಫಿ ಗೆದ್ದ ಕರ್ನಾಟಕದ ತಂಡವಂತೂ ಅಲ್ಲ. ವಾಣಿಜ್ಯ ಉದ್ದೇಶದ ತಂಡವನ್ನು ಕರೆತಂದು ವಿಧಾನಸೌಧದ ಎದುರು ಸತ್ಕರಿಸಲು ಸರ್ಕಾರ ಮುಂದಾಗಿದ್ದು ಏಕೆ ಎಂದು ಪ್ರಶ್ನಿಸಿದ ಜ್ಞಾನೇಂದ್ರ, ಜನರ ಭಾವನೆಗಳನ್ನು ರಾಜಕೀಯ ಲಾಭವಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಮುಂದಾಗಿದ್ದೇ ಅಮಾಯಕರ ಸಾವಿಗೆ ಕಾರಣ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಗೃಹ ಸಚಿವರು ಕಾಣೆಯಾಗಿದ್ದಾರೆ. ಅರ್ ಸಿಬಿ ಸಂಭ್ರಮಾಚರಣೆಗೆ ಮುನ್ನ ಪೊಲೀಸರನ್ನು ಕರೆದು ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆಯಲಾರದಷ್ಟು ಅವರು ದುರ್ಬಲರಾಗಿದ್ದಾರೆ ಎಂದು ಛೇಡಿಸಿದರು.
ಅಧಿಕಾರ ಹಂಚಿಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಚದುರಂಗದಾಟವೂ ಘಟನೆಯ ಹಿಂದಿರಬಹುದು ಎಂಬ ಅನುಮಾನವೂ ಮೂಡಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಧ್ಯಮ ಸಮನ್ವಯಕಾರ ಕೆ.ವಿ.ಅಣ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.