ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಇನ್ನು ಮೂರು– ನಾಲ್ಕು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯ ಬಳಿ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರರಾವ್ ಅವರು ಬಂದಿದ್ದು, ರಾಜಕೀಯ ಬೆಳವಣಿಗೆಗಳ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು.
ವಿಧಾನಸೌಧದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತು ಶಾಸಕ ಸುಧಾಕರ್ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕಾಂಗ್ರೆಸ್ ಶಾಸಕರು ಮತ್ತು ಸಚಿವರೊಬ್ಬರು ಸೇರಿ ಸುಧಾಕರ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿ, ಸಚಿವ ಜಾರ್ಜ್ ಕೊಠಡಿಯಲ್ಲಿ ಕೂಡಿ ಹಾಕಿದರು. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಗೂಂಡಾ ಸಂಸ್ಕೃತಿ ಇಡೀ ಜಗತ್ತಿಗೇ ಗೊತ್ತಾಗಿದೆ ಎಂದು ಅವರು ಹೇಳಿದರು.
‘ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆ ಕಾಲ ಚರ್ಚಿಸಿದೆವು. ರಾಜೀನಾಮೆಯನ್ನು ವಿಳಂಬ ಮಾಡುವುದು ಸರಿಯಲ್ಲ. ತಕ್ಷಣವೇ ರಾಜೀನಾಮೆ ಅಂಗೀಕರಿಸಬೇಕೆಂದು ಅವರಿಗೆ ಮನವಿ ಮಾಡಿದ್ದೇವೆ’ ಎಂದೂ ಯಡಿಯೂರಪ್ಪ ತಿಳಿಸಿದರು.
ಮೈತ್ರಿ ಸರ್ಕಾರ ಕೊನೇ ಹಂತಕ್ಕೆ ಬಂದು ನಿಂತಿದೆ. ಮುಂದೆ ಏನು ಆಗುತ್ತದೆಯೋ ಕಾದು ನೋಡೋಣ. ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.