ADVERTISEMENT

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 6:58 IST
Last Updated 11 ಮಾರ್ಚ್ 2022, 6:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪಂಚರಾಜ್ಯಗಳ ಫಲಿತಾಂಶ ಬಂದ ನಂತರವೂ ಯಾವುದಾದರು ಕ್ಷೇತ್ರದಲ್ಲಿ ನಿಂತು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆಯೇ? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸಾಧನೆ ಹೇಳುವುದು ಬಿಟ್ಟು ಬಿಜೆಪಿ ಸಾಧನೆಯ ಬಗ್ಗೆ ಪರಾಮರ್ಶಿಸಲು ನಾಚಿಗೆಯೆನಿಸುವುದಿಲ್ಲವೇ? ಎಂದಿದೆ.

ಯುಪಿಯಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ‌ ದುರ್ಬಲವಾಗಿದೆ. ಪಕ್ಷ ಸಂಘಟನೆಯ ಕೊರತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರು ವಿಫಲರಾಗಿದ್ದಾರೆ ಎನ್ನುವುದು ನಿಜವಾಗಿದೆ. ರಾಜ್ಯದಲ್ಲೇ ವಿಫಲರಾದವರನ್ನು ದೇಶದ ಪ್ರಧಾನಿಯಾಗಿ ಬಿಂಬಿಸುವುದು ಮೂರ್ಖತನವಲ್ಲವೇ? ಎಂದು ಕಿಡಿಕಾರಿದೆ.

ADVERTISEMENT

CongressMuktBharat ಎನ್ನುವ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದು, ಸಿಧು ಮತ್ತು ಚನ್ನಿ ಆಂತರಿಕ ಕಲಹದ ಪ್ರತಿಫಲವಾಗಿ ಪಂಜಾಬಿನಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲ ಕಚ್ಚಲಿದೆ. ಡಿಕೆಶಿ ಹಾಗೂ ಸಿದ್ದು ಅವರ ನಡುವಿನ ಕಲಹದಿಂದಾಗಿ ವಿಪಕ್ಷ ಸ್ಥಾನವನ್ನೇ ಭದ್ರಪಡಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಿಸುತ್ತಿದ್ದೇವೆ. ಪಂಚ ರಾಜ್ಯದ ಫಲಿತಾಂಶದಿಂದ ಒಂದು ವಿಚಾರ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು, ಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ ಎಂಬ ತೀರ್ಪನ್ನು ಮತದಾರರು ನೀಡಿದ್ದಾರೆ. ಶತಮಾನದ ಇತಿಹಾಸ ಇರುವ ಪಕ್ಷ, ಇತಿಹಾಸದ ಪುಟ ಸೇರುವ ಸಮಯ ಬಂದಾಗಿದೆ ಎಂದು ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.