ADVERTISEMENT

ಗಾಂಧಿ ಕುಟುಂಬದ ಬೆನ್ನಿಗೆ ನಿಂತ ರಾಜ್ಯ ಕಾಂಗ್ರೆಸ್

ಸೋನಿಯಾ ಗಾಂಧಿಗೆ ಪತ್ರ ಬರೆದ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 18:58 IST
Last Updated 24 ಆಗಸ್ಟ್ 2020, 18:58 IST
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ನಾಯಕತ್ವ ವಿಷಯದಲ್ಲಿ ಹಿರಿಯ ನಾಯಕರು ಧ್ವನಿ ಎತ್ತಿರುವ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್. ಪಾಟೀಲ ಸೇರಿದಂತೆ ಬಹುತೇಕರು ಸೋನಿಯಾ ಹಾಗೂ ರಾಹುಲ್‌ ಗಾಂಧಿ ಪರ ನಿಂತಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಸೋನಿಯಾ ಗಾಂಧಿಗೆ ಬೆಂಬಲ ಸೂಚಿಸಿ ಭಾನುವಾರ ರಾತ್ರಿಯೇ ಪತ್ರ ಬರೆದಿದ್ದಾರೆ.

ADVERTISEMENT

‘ಅನಾರೋಗ್ಯದ ಕಾರಣದಿಂದ ಪಕ್ಷವನ್ನು ಮುನ್ನಡೆಸಲು ನಿಮಗೆ ಸಾಧ್ಯವಾಗದೆ ಇದ್ದರೆ ರಾಹುಲ್ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಸಂಕಷ್ಟದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು 1998ರಿಂದ 2004ರವರೆಗೆ ಪಕ್ಷವನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ. 2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಅವಕಾಶ ಇದ್ದರೂ ಪ್ರಧಾನಿ ಹುದ್ದೆ ನಿರಾಕರಿಸಿದ್ದೀರಿ’ ಎಂದೂ ಅವರು ಪ್ರಸ್ತಾಪಿಸಿದ್ದಾರೆ.

‘ಇಂದು ದೇಶ ಅಘೋಷಿತ ತುರ್ತುಪರಿಸ್ಥಿತಿಯಲ್ಲಿದೆ. ಆಡಳಿತ ಪಕ್ಷವನ್ನು ಎದುರಿಸಲು ಪಕ್ಷದಲ್ಲಿ ಒಗ್ಗಟ್ಟು ಇರಬೇಕು. ಗಾಂಧಿ ಕುಟುಂಬ ಪಕ್ಷವನ್ನು ಮುನ್ನಡೆಸಿದಾಗ ಮಾತ್ರ ಇದು ಸಾಧ್ಯ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ವೀಟ್‌ ಮಾಡಿರುವ ಎಸ್‌.ಆರ್.ಪಾಟೀಲ, ‘ಗಾಂಧಿ ಕುಟುಂಬದ ಹಿರಿಯರು ದೇಶಕ್ಕಾಗಿ ಅಪಾರವಾದ ತ್ಯಾಗ, ಬಲಿದಾನ ಮಾಡಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟುವಲ್ಲಿ ಅವರ ಕೊಡುಗೆ ಅಪಾರ’ ಎಂದಿದ್ದಾರೆ.

‘ರಾಹುಲ್ ತಪ್ಪು ಮಾಡಿದ್ದಾರೆ!’

‘ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ. ಹಿರಿಯ ಮುಖಂಡರು ಬಿಜೆಪಿ ಮತ್ತು ಮಾಧ್ಯಮಗಳೊಂದಿಗೆ ಜೋಡಿಸುವ ಮೂಲಕ ಎಂದು ಹೇಳಬೇಕಿತ್ತು’ ಎಂದು ಕಾಂಗ್ರೆಸ್‌ ಮಾಜಿ ಸಂಸದೆ, ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ‘ಸೋನಿಯಾ ಗಾಂಧಿಗೆ ಬರೆದ ಪತ್ರವನ್ನು ಹಿರಿಯ ಮುಖಂಡರು, ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಷ್ಟೇ ಅಲ್ಲ, ಸಿಡಬ್ಲ್ಯುಸಿ ಸಭೆ ಮಾತುಕತೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದನ್ನು ಮುಂದುವರಿಸುತ್ತಾರೆ. ಅದ್ಭುತ!’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.