ADVERTISEMENT

ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಆರ್‌. ಮಂಜುನಾಥ್‌  ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 15:23 IST
Last Updated 19 ಫೆಬ್ರುವರಿ 2025, 15:23 IST
ಆರ್‌. ಮಂಜುನಾಥ್‌
ಆರ್‌. ಮಂಜುನಾಥ್‌   

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಆರ್‌. ಮಂಜುನಾಥ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆಂಪಣ್ಣ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ್‌ ಬಿ. ಶೇಗಜಿ ಅವರನ್ನು ಹಂಗಾಮಿಯಾಗಿ ನೇಮಿಸಲಾಗಿತ್ತು. ಸಂಘದ ಬೈ-ಲಾದಂತೆ, ಕಾರ್ಯಕಾರಿ ಸಮಿತಿ ಸದಸ್ಯರು, ಅಧ್ಯಕ್ಷರನ್ನು ಆಯ್ಕೆ ಮಾಡಬೇಕು.  ಚುನಾವಣಾಧಿಕಾರಿ ಲಕ್ಷ್ಮೀಶ ಅವರು ಅಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆಯನ್ನು ಬುಧವಾರ ನಡೆಸಿದರು.

ಸಂಘದ ಕಾರ್ಯಾಧ್ಯಕ್ಷರಾಗಿದ್ದ ಆರ್. ಮಂಜುನಾಥ್‌ ಅವರೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

ADVERTISEMENT

‘ಕೆಂಪಣ್ಣ ಅವರು ಅಧ್ಯಕ್ಷರಾಗಿದ್ದಾಗ ಗುತ್ತಿಗೆದಾರರ ಪರವಾಗಿ ಹೋರಾಟಗಳನ್ನು ಮಾಡಿದ್ದೇನೆ. ಆಗಿನಿಂದಲೂ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದ ನಾನು, ಗುತ್ತಿಗೆದಾರರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ನನ್ನನ್ನು ಅಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗಾಗಿ ನಾನು ಹೋರಾಟ ಮಾಡುತ್ತೇನೆ’ ಎಂದು ಆರ್‌. ಮಂಜುನಾಥ್‌ ಹೇಳಿದರು.

‘ರಾಜ್ಯ ಘಟಕದ ಜೊತೆಗೆ ಜಿಲ್ಲಾ ಸಮಿತಿಗಳಿಗೆ ಹೆಚ್ಚು ಬಲ ನೀಡಿ, ಅವುಗಳನ್ನು ಸಂಘಟಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜಿಲ್ಲಾ ಸಮಿತಿಗಳು ತಮ್ಮ ಹಕ್ಕುಗಳಿಗೆ ಹೋರಾಟ  ನಡೆಸಲು ಸರ್ವರೀತಿಯಲ್ಲೂ ನೆರವು ನೀಡಲಾಗುತ್ತದೆ. ಸ್ಥಳೀಯ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರು ವರ್ಷಗಳಿಂದ ಬಿಲ್‌ ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಬಿಲ್‌ ಪಾವತಿ ಮಾಡಿಸುವುದು ಪ್ರಥಮ ಆದ್ಯತೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಈ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಗುತ್ತಿಗೆದಾರರ ಹಿತರಕ್ಷಣೆ ಒತ್ತು ನೀಡಿ, ಕಾರ್ಯಚಟುವಟಿಕೆಗಳನ್ನು ರೂಪಿಸಲಾಗುತ್ತದೆ’ ಎಂದು ತಿಳಿಸಿದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್‌ ಅವರ ನೇತೃತ್ವದಲ್ಲಿ ಆರ್. ಮಂಜುನಾಥ್‌ ಅವರನ್ನು ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.