ADVERTISEMENT

1,242 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ

310 ಪ್ರಾಂಶುಪಾಲರ ನೇಮಕಕ್ಕೂ ಅಸ್ತು

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:13 IST
Last Updated 30 ಜೂನ್ 2021, 21:13 IST
   

ಬೆಂಗಳೂರು: ‘ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರನ್ನು ಆರು ತಿಂಗಳಒಳಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಂದರ್ಶನ ಇಲ್ಲದೆ, ಕೇವಲ ಲಿಖಿತ ಪರೀಕ್ಷೆ ಮೂಲಕ ಈ ಹುದ್ದೆಗಳನ್ನು ತುಂಬಲಾಗುವುದು. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಅರ್ಹತೆ ಆಧರಿಸಿ, ಪಾರದರ್ಶಕವಾಗಿ ಇಡೀ ನೇಮಕಾತಿ ಪ್ರಕ್ರಿಯೆ ನಡೆಯಲಿದೆ’ ಎಂದರು.

‘2009ರ ನಂತರ ಪ್ರಾಂಶುಪಾಲರ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಇದಕ್ಕೆ 55 ವರ್ಷ ವಯೋಮಿತಿ ಇದೆ. 2017ರ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕವೂನಡೆದಿಲ್ಲ. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ 500 ಅಂಕಗಳಿಗೆ (ಕನ್ನಡ 100, ಇಂಗ್ಲಿಷ್‌ 100, ಸಾಮಾನ್ಯ ಜ್ಞಾನ 50 ಮತ್ತು ಐಚ್ಛಿಕ ವಿಷಯಗಳಿಗೆ 250 ಅಂಕ), ಪ್ರಾಂಶುಪಾಲರ ಆಯ್ಕೆ ಪರೀಕ್ಷೆ 100 ಅಂಕಗಳಿಗೆ ನಡೆಯಲಿದೆ. ಎಲ್ಲ ಪ್ರಶ್ನೆಗಳು ಬಹು ಆಯ್ಕೆ ಮಾದರಿಯಲ್ಲಿ ಇರಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಅರ್ಹತೆ ಹೊರತುಪಡಿಸಿ ಬೇರೆ ಯಾವುದೇ ಮಾನದಂಡ ಈ ನೇಮಕಾತಿಯಲ್ಲಿ ಇರುವುದಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಎಂಜಿನಿಯರಿಂಗ್‌ಗೆ ಸಿಇಟಿ ಕನಿಷ್ಠ ಅಂಕ: ‘ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಕನಿಷ್ಠ ಅಂಕ ಅರ್ಹತೆಯಾಗಿ ನಿಗದಿಪಡಿಸಲಾಗುವುದು. ಆದರೆ ಎಷ್ಟು ಅಂಕ ನಿಗದಿಪಡಿಸಬೇಕು ಎಂಬ ಬಗ್ಗೆ ತೀರ್ಮಾನಿಸಿಲ್ಲ. ಇತರ ವೃತ್ತಿಪರ ಕೋರ್ಸ್‌ಗಳಿಗೂ ಸಿಇಟಿಯಲ್ಲಿ ಕನಿಷ್ಠ ಅಂಕ ನಿಗದಿಪಡಿಸಬೇಕೆ ಎಂಬ ಬಗ್ಗೆ ಈ ಬಗ್ಗೆ ಪ್ರಸ್ತಾವನೆ ಬಂದ ಬಳಿಕ ನಿರ್ಧರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.