ADVERTISEMENT

ಸಾಲ ಆಧಾರಿತ ಅಭಿವೃದ್ಧಿ: 21ರ ಬಜೆಟ್‌ ‘ಮಂತ್ರ’

ಜ.1 ರಿಂದ ಬಜೆಟ್‌ ಪೂರ್ವ ಸಭೆ * ಮೊದಲ ವಾರವೇ ಬಿಜೆಪಿ ಶಾಸಕರ ಸಭೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:22 IST
Last Updated 28 ಡಿಸೆಂಬರ್ 2020, 20:22 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2021ರ ಜನವರಿ 1 ರಿಂದಲೇ ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಪಕ್ಷದ ಶಾಸಕರಿಂದ ಅಗತ್ಯ ಸಲಹೆ– ಸೂಚನೆಗಳನ್ನು ಪಡೆಯಲು ಜನವರಿ ಮೊದಲ ವಾರ ಶಾಸಕರ ಸಭೆ ಕರೆಯಲು ನಿರ್ಧರಿಸಿದ್ದಾರೆ.

ಪಕ್ಷದ ಶಾಸಕರ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ ಎಂಬ ದೂರುಗಳ ಬೆನ್ನಲ್ಲೇ, ಈ ಬಾರಿ ಶಾಸಕರ ಸಲಹೆ ಸೂಚನೆಗಳನ್ನು ಕೇಳಿಯೇ ಹೊಸ ಕಾರ್ಯಕ್ರಮಗಳಿಗೆ ಅಂತಿಮ ರೂಪ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಲು ಸಾಲ ಎತ್ತುವುದು ಅನಿವಾರ್ಯವಾಗಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದ ಎಲ್ಲ ವಲಯಗಳ ಶಾಸಕರ ಪ್ರತ್ಯೇಕ ಸಭೆಗಳನ್ನು ಕರೆಯಲಾಗುವುದು. ಇದಕ್ಕಾಗಿ ಎರಡು ದಿನಗಳ ಸಭೆ ನಡೆಸಿ ಅವರು ಮಾಹಿತಿ ಪಡೆಯಲಿದ್ದಾರೆ. ವಿವಿಧ ವಲಯಗಳ ಶಾಸಕರ ಬೇಡಿಕೆಗಳು ಬೇರೆಯೇ ಆಗಿರುವುದರಿಂದ ಎಲ್ಲ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ, ಅವರ ವಿಶ್ವಾಸ ಗಳಿಸುವುದೂ ಮುಖ್ಯಮಂತ್ರಿಯವರ ಇಂಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಆದ ದಿನದಿಂದಲೂ ಪ್ರವಾಹ, ಮಳೆ, ಕೊರೊನಾದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಹೆಚ್ಚಿನ ಪ್ರಮಾಣದ ಹಣವನ್ನು ಪರಿಹಾರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹರಿಸಬೇಕಾಯಿತು. ಲಾಕ್‌ಡೌನ್‌ ಪರಿಣಾಮ ಆರ್ಥಿಕ ದುಸ್ಥಿತಿ ಉಂಟಾಗಿ ಸಾಕಷ್ಟು ಯೋಜನೆಗಳಿಗೆ ಕತ್ತರಿ ಹಾಕಲಾಯಿತು. ಕೇಂದ್ರದಿಂದ ಜಿಎಸ್‌ಟಿ ಪರಿಹಾರವೂ ಸಿಗದ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ₹33 ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮಸೂದೆಗೂ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆದಿದೆ.

‘ಕೋವಿಡ್‌–19 ಕಾರಣ ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಜ್ಯ ಸರ್ಕಾರಗಳು ತಮ್ಮ ಜಿಎಸ್‌ಡಿಪಿಯ ಶೇ 5 ರಷ್ಟು ಸಾಲ ಪಡೆಯಲು ಕೇಂದ್ರ
ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಸಾಲ ಪಡೆಯುವ ಪ್ರಮಾಣ ಜಿಎಸ್‌ಡಿಪಿಯ ಶೇ 3 ಇತ್ತು. ಈಗ ಅದನ್ನು ಶೇ 2 ರಷ್ಟು ಹೆಚ್ಚಿಸಲಾಗಿದೆ. ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಒಂದು ಸಲಕ್ಕೆ ಮಾತ್ರ ಹೆಚ್ಚುವರಿ ಸಾಲ ಪಡೆಯಲು ನಿರ್ಧರಿಸಿದೆ. ಸಾಲ ಪಡೆಯುವ ಪ್ರಮಾಣ ಶೇ 5 ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯವು ₹36,000 ಕೋಟಿ ಸಾಲ ಪಡೆಯುವ ಅವಕಾಶ ಇದ್ದುಮ ₹33,000 ಕೋಟಿ ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ. ಆರ್ಥಿಕ ಸ್ಥಿತಿಯನ್ನು ಹಳಿಗೆ ತರಲು ಸಹಾಯಕವಾಗುತ್ತದೆ’ ಎಂಬುದು ಸರ್ಕಾರದ ಲೆಕ್ಕಾಚಾರ.

ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಕೈಗಾರಿಕಾ ವಲಯ ಮತ್ತು ಸೇವಾ ವಲಯಗಳು ಹೆಚ್ಚಿನ ಬೇಡಿಕೆಗಳ ಪಟ್ಟಿ ಸಲ್ಲಿಸಲಿವೆ. ಈ ಮಧ್ಯೆ ಅನಿಶ್ಚಿತತೆಯ ತೂಗುಗತ್ತಿಯ ಮೇಲೆ ನಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪಕ್ಷದ ಶಾಸಕರನ್ನು ಸಮಾಧಾನಗೊಳಿಸಲು, ಒಂದಷ್ಟು ಅನುದಾನ ಬಿಡುಗಡೆ ಮಾಡುವುದು ಅನಿವಾರ್ಯವೂ ಆಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.