ADVERTISEMENT

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ಅಡ್ಡಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 16:15 IST
Last Updated 17 ಜನವರಿ 2025, 16:15 IST
ಎಚ್‌ಡಿಕೆ
ಎಚ್‌ಡಿಕೆ   

ನವದೆಹಲಿ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಪುನರುಜ್ಜೀವನಕ್ಕೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುನರುಜ್ಜೀವನದ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು. ಆದರೆ, ಸಭೆ ಕರೆದಿಲ್ಲ. ಸೌಜನ್ಯಕ್ಕೆ ಒಂದು ಪತ್ರವನ್ನೂ ಬರೆದಿಲ್ಲ’ ಎಂದು ಕಿಡಿಕಾರಿದರು. ದೀಪಾವಳಿ ದಿನವೇ ಕೆಲಸಗಾರರನ್ನು ರಾಜ್ಯ ಸರ್ಕಾರ ಮನೆಗೆ ಕಳುಹಿಸಿತ್ತು. ನೀವು ಅವರ ಮನೆ ಬೆಳಗುತ್ತೀರಾ ಎಂದು ಪ್ರಶ್ನಿಸಿದರು. 

ಕೆಐಒಸಿಎಲ್‌ ಅನ್ನು ಎನ್‌ಎಂಡಿಸಿ ಜತೆಗೆ ವಿಲೀನ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಸಂಸ್ಥೆಯು ನಷ್ಟ ಸೇರಿದಂತೆ ಅನೇಕ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಬಳ್ಳಾರಿ ದೇವದಾರಿನ ಅರಣ್ಯವನ್ನು ಕೆಐಒಸಿಎಲ್‌ಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಅದಕ್ಕೂ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿತ್ತು. ಈ ಜಾಗ ಹಸ್ತಾಂತರಿಸಲು ರಾಜ್ಯ ಸರ್ಕಾರ ನೆಪ ಹೇಳುತ್ತಿದೆ ಎಂದು ಕಿಡಿಕಾರಿದರು. 

ADVERTISEMENT

‘ಎಚ್‌ಎಂಟಿ ಭೂಮಿ ವಿಚಾರದಲ್ಲಿ ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಮಹಾರಾಜರು ಕೊಟ್ಟಿರುವ ಭೂಮಿ ಅದು. ಕಾಂಗ್ರೆಸ್‌ನವರು ಲೂಟಿ ಹೊಡೆಯಲು ಬಂದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಟ್ಟಡ ಕಟ್ಟಿದ್ದು ಏಕೆ. ಎಚ್‌ಎಂಟಿ ಪುನಶ್ಚೇತನಕ್ಕೆ ನಾವು ಮುಂದಾಗಿದ್ದೆವು. ಕಾಂಗ್ರೆಸ್‌ನವರು ಹೊಸ ಕಥೆ ಶುರು ಮಾಡಿದ್ದಾರೆ. ಇಂತಹವರಿಂದ ರಾಜ್ಯ ಉದ್ಧಾರವಾಗಲು ಸಾಧ್ಯವೇ’ ಎಂದು ಅವರು ಕೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.