ADVERTISEMENT

ಒಬ್ಬ ನಿಕೃಷ್ಟ 'ಟ್ರೋಲರ್‌'ಗೆ ಮಂಡಿಯೂರಿದ ಸರ್ಕಾರ: ಬಿ.ಕೆ. ಹರಿಪ್ರಸಾದ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:09 IST
Last Updated 4 ಜೂನ್ 2022, 16:09 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್   

ಬೆಂಗಳೂರು: ‘ಒಬ್ಬ ನಿಕೃಷ್ಟ ‘ಟ್ರೋಲರ್‌’ನನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದ ರಾಜ್ಯದ ಬಿಜೆಪಿ ಸರ್ಕಾರ, ಈಗ ಪರಿಷ್ಕೃತ ಪಠ್ಯಗಳನ್ನು ಉಳಿಸಿಕೊಳ್ಳುವ ಮೂಲಕ ಆ ವ್ಯಕ್ತಿಗೆ ಮಂಡಿಯೂರಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸುವ ಗಿಮಿಕ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಷ್ಕೃತ ಪಠ್ಯಗಳನ್ನು ಉಳಿಸಿಕೊಂಡು ರಾಜ್ಯದ ಜನರ ದಿಕ್ಕು ತಪ್ಪಿಸಿದ್ದಾರೆ. ನಾಗಪುರದವರಿಂದ ಈ ‘ಕಲೆ’ಯನ್ನು ಕಲಿತಿರುವಂತಿದೆ. ಒಬ್ಬ ಟ್ರೋಲರ್‌ ಎದುರಿನಲ್ಲಿ ಸರ್ಕಾರವೇ ನೆಲಕ್ಕೆ ಬಿದ್ದು ಹೊರಳಾಡುತ್ತಿರುವುದು ನಾಚಿಕೆಗೇಡಿನ ಪರಮಾವಧಿ’ ಎಂದಿದ್ದಾರೆ.

ಬಸವಣ್ಣ, ನಾರಾಯಣ ಗುರುಗಳು, ಕುವೆಂಪು ಮತ್ತು ಸ್ವಾತಂತ್ರ್ಯ ಹೋರಾಟಗಾರನ್ನು ಅವಮಾನಿಸಿರುವ, ನಾಡಗೀತೆಯನ್ನು ತಿರುಚಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ನಿಲ್ಲುವ ಮೂಲಕ ಮುಖ್ಯಮಂತ್ರಿಯವರು ಇಡೀ ಸರ್ಕಾರದ ಜಂಘಾಬಲ ಕುಸಿಯುವಂತೆ ಮಾಡಿದ್ದಾರೆ. ಕುವೆಂಪು ಮತ್ತು ನಾಡಗೀತೆಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನೇ ಅವಮಾನಿಸಿರುವುದಕ್ಕೆ ಸಾಕ್ಷ್ಯಗಳಿವೆ. ಆ ವ್ಯಕ್ತಿಯನ್ನು ಬಂಧಿಸಬೇಕಲ್ಲವೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ನಾಡಿನ ಜನರ ಆಗ್ರಹಕ್ಕೆ ಬೆಲೆ ಕೊಟ್ಟು ರೋಹಿತ್‌ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಸಮಾಜ ಸುಧಾರಕರು, ಮಹಾನ್‌ ವ್ಯಕ್ತಿಗಳನ್ನು ಅವಮಾನಿಸಿರುವ ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯಬೇಕು. ಹಿಂದೆ ಇದ್ದ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು. ಈ ವಿಚಾರದಲ್ಲೂ ‘ಹಾವಿನಪುರ’ದವರ ಆದೇಶಕ್ಕೆ ಕಾಯುತ್ತಾ ಕೂರಬೇಡಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಿಂಚಿತ್ತಾದರೂ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲವಾದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಮುಖ್ಯಮಂತ್ರಿಯವರನ್ನುದ್ದೇಶಿಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.