ADVERTISEMENT

ಜಲಮೂಲಗಳ ರಕ್ಷಣೆಗೆ ಯವಜನರ ಸಹಭಾಗಿತ್ವ: ಸಚಿವ ಬೋಸರಾಜು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 0:15 IST
Last Updated 6 ಆಗಸ್ಟ್ 2023, 0:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನದಿ, ಕೆರೆ, ನಾಲೆಗಳು ಸೇರಿದಂತೆ ಜಲಮೂಲಗಳ ಸಂರಕ್ಷಣೆಗೆ ಯುವಜನರ ಸೇವೆಯನ್ನು ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದರು.

ಸಚಿವರನ್ನು ಶನಿವಾರ ಭೇಟಿ ಮಾಡಿದ ಆರ್ಟ್‌ ಆಫ್‌ ಲಿವಿಂಗ್‌ ನದಿ ಪುನಶ್ಚೇತನ ಸಂಸ್ಥೆಯ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ ಅವರು, ‘ಜಲಮೂಲಗಳ ಒತ್ತುವರಿ ತಡೆಯುವುದು ಮತ್ತು ಅವುಗಳ ಪುನಶ್ಚೇತನದ ಕೆಲಸಕ್ಕೆ ಸ್ಥಳೀಯ ಯುವಜನರು ಹಾಗೂ ಗ್ರಾಮೀಣ ಜನರ ಸೇವೆಯನ್ನು ಪಡೆಯುವ ಯೋಚನೆ ಇದೆ. ಈ ಕೆಲಸಕ್ಕೆ ಅವರನ್ನು ಸ್ವಯಂಸೇವಕರನ್ನಾಗಿ ನೇಮಕ ಮಾಡುವ ಚಿಂತನೆ ಇದೆ’ ಎಂದರು.

ಸ್ಥಳೀಯ ಯುವಜನರು ತಮ್ಮ ಊರಿನ ಜಲ ಮೂಲಗಳ ಮೇಲೆ ನಿರಂತರ ನಿಗಾ ಇಡಬೇಕು. ಒತ್ತುವರಿ ಸೇರಿದಂತೆ ಸಮಸ್ಯೆಗಳು ಕಂಡುಬಂದಾಗ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು. ಆಗ ಜಲ ಮೂಲಗಳ ಸಂರಕ್ಷಣೆ ಕೆಲಸ ಕ್ರಮಬದ್ಧವಾಗಿರುತ್ತದೆ ಎಂಬುದು ಈ ಯೋಚನೆ ಹಿಂದಿರುವ ಉದ್ದೇಶ ಎಂದು ಹೇಳಿದರು.

ADVERTISEMENT

ಅಧ್ಯಯನಕ್ಕೆ ಸೂಚನೆ: ರಾಯಚೂರು ಜಿಲ್ಲೆಯ ಅತ್ತನೂರು, ಕಲ್ಲೂರ, ಹೀರಾ ಮತ್ತು ಚಿಂಚರಕಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಕೊರತೆ ಹಾಗೂ ಪರಿಹಾರೋಪಾಯಗಳ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಆರ್ಟ್‌ ಆಫ್‌ ಲಿವಿಂಗ್‌ ನದಿ ‍ಪುನಶ್ಚೇತನ ಸಂಸ್ಥೆಯ ಪ್ರತಿನಿಧಿಗಳಿಗೆ ಸಚಿವರು ಸೂಚಿಸಿದರು.

ಆರ್ಟ್‌ ಆಫ್‌ ಲಿವಿಂಗ್‌ ನದಿ ಪುನಃಶ್ಚೇತನ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕ ಲಿಂಗರಾಜು ಯಲೆ, ತಜ್ಞರಾದ ರವೀಂದ್ರ ಭಟ್‌, ಸಹದೇವ್‌ ಗುಂಡಜ್ಜಿ, ಟಿ.ಎಸ್. ಹುಮ್ಸೆ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.