ADVERTISEMENT

ಮೈತ್ರಿ ಬಹುತೇಕ ಮುಗಿದ ಅಧ್ಯಾಯ?

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:53 IST
Last Updated 21 ಸೆಪ್ಟೆಂಬರ್ 2019, 19:53 IST
   

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಿ ಮುಗ್ಗರಿಸಿದ್ದಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು, ವಿಧಾನಸಭಾ ಉಪಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ನಿರ್ಧಾರಕ್ಕೆ ಬಂದಂತಿದೆ.

ರಾಜ್ಯದ ವಿವಿಧೆಡೆ ಶನಿವಾರ ಹೇಳಿಕೆ ನೀಡಿದ ಎರಡೂ ಪಕ್ಷಗಳ ಮುಖಂಡರು, ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ಒಲವು ತೋರಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಂಡಿದ್ದರಿಂದಲೇ 28 ಕ್ಷೇತ್ರಗಳ ಪೈಕಿ ಕೇವಲ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಿಗೆ ಗೆಲುವು ಸಾಧ್ಯವಾಯಿತು. ಮೈತ್ರಿ ಮಾಡಿಕೊಂಡಿದ್ದರಿಂದ ಎರಡೂ ಪಕ್ಷಗಳಿಗೆ ಭಾರಿ ಹಿನ್ನಡೆ ಆಗಿದೆ. ಇದರ ಲಾಭ ಬಿಜೆಪಿಗೆ ಆಗುತ್ತದೆ. ಹೀಗಾಗಿ ಮೈತ್ರಿ ಮಾಡಿಕೊಳ್ಳದೆ ಇರುವುದೇ ಉತ್ತಮ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

‘ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ನಮಗೆ ಎದುರಾಳಿಗಳಾಗಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

‘ಮೂರು ತಿಂಗಳಿಂದ ನಾನು ಸಭೆ ನಡೆಸುತ್ತ ಬಂದಿದ್ದೇನೆ. ಕಾಂಗ್ರೆಸ್‌ ಜತೆ ಮೈತ್ರಿ ಬೇಡ ಎಂಬುದೇ ಎಲ್ಲರ ಅಭಿಪ್ರಾಯವಾಗಿದೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೇ ಪಕ್ಷದ ಹೈಕಮಾಂಡ್‌ ಗೊಂದಲದಲ್ಲಿದೆ. ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡುವ ತಲೆನೋವು ಅವರಿಗೆ ಬೇಡ ಎಂದು ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ’ ಎಂದು ಜೆಡಿಎಸ್‌ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.

‘ಎಲ್ಲ 15 ಕ್ಷೇತ್ರಗಳಿಗೆ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ’ ಎಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸುವ ಸಂದರ್ಭದಲ್ಲೇಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದರು.

ಆದರೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಸ್ವಲ್ಪ ಭಿನ್ನ ಹೇಳಿಕೆ ನೀಡಿದ್ದು, ಹೈಕಮಾಂಡ್‌ ಜತೆಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.