ADVERTISEMENT

ರಾಜ್ಯದ ವಿವಿಧೆಡೆ ಮಳೆ: ಸಿಡಿಲಿಗೆ ರೈತ ಸಾವು

ಶಹಾಪುರದಲ್ಲಿ ಸಿಡಿಲಿಗೆ 19 ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ಬಾಗಲಕೋಟೆ, ಹಾವೇರಿ, ವಿಜಯನಗರ, ಗದಗ, ರಾಮನಗರ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್‌, ಕೊಪ್ಪಳ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸಿಡಿಲಿಗೆ ರೈತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ.

ಹುಬ್ಬಳ್ಳಿ ವರದಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಆಲಗುಂಡಿ ಬಿ.ಕೆ. ಗ್ರಾಮದಲ್ಲಿ ಶನಿವಾರ ಸಿಡಿಲು ಬಡಿದು ರೈತ ಬಸಪ್ಪ ಮಾದರ (36) ಎಂಬುವರು ಮೃತಪಟ್ಟಿದ್ದಾರೆ. ವಿಠ್ಠಲ‌ ಮಾದರ ಎಂಬುವರಿಗೆ ಗಾಯವಾಗಿದೆ.

ಜಿಲ್ಲೆಯ ಮುಧೋಳ, ಕಲಾದಗಿ ಬಾಗಲಕೋಟೆ, ಇಳಕಲ್‌ ಮತ್ತು ವಿಜಯಪುರ ಜಿಲ್ಲೆಯ ಕೊಲ್ಹಾರ, ಬಸವನ ಬಾಗೇವಾಡಿ, ನಾಲತವಾಡದಲ್ಲಿ ಮಳೆಯಾಗಿದೆ. ಬೆಳಗಾವಿ, ಹಾವೇರಿ, ಗದಗ, ವಿಜಯನಗರ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. 

ADVERTISEMENT

ರಾಮನಗರ ವರದಿ: ಬಿಸಿಲಿನಿಂದ ಬಸವಳಿದಿದ್ದ ನಗರದಲ್ಲಿ ಶನಿವಾರ ಧಾರಾಕಾರವಾಗಿ ಮಳೆ ಸುರಿಯಿತು. ರಾಮನಗರದಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿರುವ ವಿವಿಧೆಡೆ ರಸ್ತೆಗಳು ಕೆಸರು ಗದ್ದೆಯಂತಾದವು. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಗ್ರಾಮೀಣ ಭಾಗದಲ್ಲೂ ಮಳೆಯಾಗಿದೆ. 

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್‌, ಕೊಪ್ಪಳ, ರಾಯಚೂರು ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ವಾತಾವರಣ ತುಸು ತಂಪಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸಿಡಿಲು ಬಡಿದು 19 ಕುರಿಗಳು ಮೃತಪಟ್ಟಿವೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆ ಚಿತ್ತೂರಲ್ಲಿ ಅತ್ಯಧಿಕ 11.2 ಸೆಂ.ಮೀ., ಇದುರುಕುಂಚಾಡಿ ಮತ್ತು ಹಕ್ಲಾಡಿಯಲ್ಲಿ 10 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ‌ಮುಲ್ಕಿಯಲ್ಲಿ 6.5 ಸೆಂ.ಮೀ. ಮೂಡುಬಿದಿರೆಯಲ್ಲಿ 5.9 ಸೆಂ.ಮೀ. ಮಳೆ ದಾಖಲಾಗಿದೆ. ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಜೆ ಜಲಾಶಯಕ್ಕೆ ಒಳ ಹರಿವು ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.