ADVERTISEMENT

ಕನ್ನಡ– ಮರಾಠಿ ಸಂಸ್ಕೃತಿ ಬೆಸೆದ ನವರಾತ್ರಿ

ಯಲ್ಲಮ್ಮ ದೇವಿಗೆ ಮರಾಠಿಗರೇ ಭಕ್ತರು, ಪಂಢರಿನಾಥನಿಗೆ ಕನ್ನಡಿಗರೇ ಸಂತರು

ಸಂತೋಷ ಈ.ಚಿನಗುಡಿ
Published 1 ಅಕ್ಟೋಬರ್ 2022, 19:31 IST
Last Updated 1 ಅಕ್ಟೋಬರ್ 2022, 19:31 IST
ಬೆಳಗಾವಿಯಲ್ಲಿ ಶುಕ್ರವಾರ ನವರಾತ್ರಿ ಪೂಜೆಗೆ ಅಲಂಕೃತರಾಗಿ ಬಂದ ಕನ್ನಡ– ಮರಾಠಿ ವನಿತೆಯರು
ಬೆಳಗಾವಿಯಲ್ಲಿ ಶುಕ್ರವಾರ ನವರಾತ್ರಿ ಪೂಜೆಗೆ ಅಲಂಕೃತರಾಗಿ ಬಂದ ಕನ್ನಡ– ಮರಾಠಿ ವನಿತೆಯರು   

ಬೆಳಗಾವಿ: ಉಳಿದೆಲ್ಲ ಗಡಿ ಪ್ರದೇಶಗಳಿಗಿಂತ ಬೆಳಗಾವಿ ವಿಭಿನ್ನವಾಗಿ ಕಾಣಿಸುವುದೇ ಸಾಂಸ್ಕೃತಿಕ ಬೆಸುಗೆಯಿಂದ. ಅದರಲ್ಲೂ ಹಬ್ಬಗಳು ಬಂದರೆ ಸಾಕು; ಕನ್ನಡ– ಮರಾಠಿ ಜೀವಗಳ ಮಧ್ಯೆ ಚುಂಬಕಶಕ್ತಿ ಸೃಜಿಸುತ್ತದೆ. ಈ ಅಯಸ್ಕಾಂತೀಯ ಸೆಳೆತವೇ ನಮ್ಮನ್ನು ಶತಮಾನಗಳಿಂದೆ ಬಿಗಿದುಕೊಂಡಿದೆ.

ಒಂದು ಸಂಸ್ಕೃತಿ, ಸಂಪ್ರದಾಯಗಳು– ಇನ್ನೊಂದು ಸಂಸ್ಕೃತಿ, ಸಂಪ್ರದಾಯಗಳ ಮೇಲೆ ‘ಓವರ್‌ಲ್ಯಾಪ್‌’ ಆಗುತ್ತಲೇ ಬಂದಿವೆ. ಇದರಲ್ಲಿ ಪುರುಷರಿಗಿಂತ ಗಟ್ಟಿಯಾದ ಬೆಸುಗೆ ಕಂಡುಬರುವುದು ಮಹಿಳೆಯರಲ್ಲಿ. ಕನ್ನಡತಿ ಮತ್ತು ಮರಾಠಿಗಿತ್ತಿಯರ ಕೂಟ, ಒಡನಾಟಗಳು ಎರಡೂ ದಿಕ್ಕುಗಳನ್ನು ಒಗ್ಗೂಡಿಸಿವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಗುವುದು ನವರಾತ್ರಿ ಉತ್ಸವದಲ್ಲಿ.

ಹೌದು. ನವರಾತ್ರಿಯಲ್ಲಿ ಕನ್ನಡ ಹಾಗೂ ಮರಾಠಿಗರ ಆಚರಣಾ ಪದ್ಧತಿಗಳು ತುಸು ಭಿನ್ನ. ಕನ್ನಡಿಗರು ಮಹಾಲಕ್ಷ್ಮಿ, ದ್ಯಾಮವ್ವ, ಕಾತ್ಯಾಯಿನಿ, ಚಾಮುಂಡಿ ಮೂರ್ತಿಗಳನ್ನು ಆರಾಧಿಸುವುದು ರೂಢಿ. ಅದೇ ರೀತಿ ಮರಾಠಿಗರು ದುರ್ಗಾಮಾತೆ, ಭಾರತಮಾತೆ, ಸಂತೋಷಿಮಾತೆ, ಜೀಜಾಮಾತೆಗೆ ನಡೆದುಕೊಳ್ಳುವುದು ವಾಡಿಕೆ. ಈ ದೇವತೆಗಳ ಅವತಾರ ಮಾತ್ರ ಭಿನ್ನ.

ADVERTISEMENT

ಕಚ್ಚೆಸೀರೆ, ಮೂಗಿಗೆ ಹೊಳಪಿನ ನತ್ತು, ಉದ್ದ ಜಡೆಗೆ ಮುತ್ತಿನ ಮಾಲೆ, ಸೊಂಟಪಟ್ಟಿ, ಬಾಜುಬಂದ್, ಕೈಯಲ್ಲೊಂದು ಕೇಸರಿ ಝಂಡಾ... ಮರಾಠಿ ಹೆಣ್ಣುಮಕ್ಕಳ ಅಲಂಕಾರ ತುಂಬ ವಿಶೇಷ. ಹದಿನಾರು ಮೊಳದ ಸೀರೆ, ಬೆಂಡೋಲೆ, ಉದ್ದ ಜಡೆಗೆ ಹೂವಿನ ದಂಡೆ, ಬೈತಲೆ ಬೊಟ್ಟು, ನೀಳಮೂಗಿಗೆ ಪುಟ್ಟ ಮೂಗುತಿ ಕನ್ನಡತಿಯರಲ್ಲಿ ಎದ್ದುಕಾಣುವ ಅಲಂಕಾರ. ಈಗ ಯಾವುದೇ ಹಬ್ಬ ಬಂದರೂ ಒಬ್ಬರ ಅಲಂಕಾರ ಇನ್ನೊಬ್ಬರನ್ನು ಆವರಿಸಿಕೊಂಡು ಬಿಡುತ್ತದೆ.

ಪುರುಷರಲ್ಲೂ ಅಷ್ಟೇ. ಹಲವು ಕನ್ನಡಿಗರು ಈಗ ಮರಾಠಿ ಪದ್ಧತಿಯ ಕೇಸರಿ ರುಮಾಲು, ಕುರ್ತಾ–ಪಾಯಜಾಮ್ ಧರಿಸುವುದನ್ನೂ ಸಂಭ್ರಮಿಸುತ್ತಾರೆ. ಅದೇ ರೀತಿ ಕನ್ನಡಿಗರ ಧೋತರ, ಹಳದಿ ಮುಂಡಾಸುಗಳನ್ನು ಮರಾಠಿಗರೂ ಶಿರವೇರಿಸಿಕೊಳ್ಳುತ್ತಾರೆ. ಅಚ್ಚರಿಯೆಂದರೆ; ಇವುಗಳಲ್ಲಿ ಯಾವ ಉಡುಗೆ– ಯಾರ ಮೂಲ ಎಂಬುದೂ ಗುರುತಿಸಲಾಗದಷ್ಟು ವಿನಿಮಯವಾಗಿವೆ.

ದೇವಾರಾಧನೆ: ಕನ್ನಡಿಗರ ಶಕ್ತಿಮಾತೆ ಯಲ್ಲಮ್ಮನ ಗುಡ್ಡಕ್ಕೆ ಬರುವವರಲ್ಲಿ ಮರಾಠಿಗರೇ ಹೆಚ್ಚು. ಅದೇ ರೀತಿ ಪಂಢರಪುರದ ವಿಠ್ಠಲನ ಭಕ್ತರೆಲ್ಲರೂ ಕನ್ನಡದ ಸಂತರೇ ಆಗಿದ್ದಾರೆ. ಇದೇ ಕಾರಣಕ್ಕೆ ವಿಠ್ಠಲನಿಗೆ ‘ಕಾನಡರಾಜಾ ಪಂಢರಿಚಾ’ ಎಂಬ ಹೆಸರೂ ಬಂದಿದೆ. ಹಲವು ಅಭಂಗಗಳಲ್ಲೂ ಕನ್ನಡಿಗರು ಪಂಢರಿನಾಥನನ್ನು ಸ್ತುತಿಸುತ್ತಾರೆ.

ಹಬ್ಬದ ಉಡುಗೆ– ಅಡುಗೆಯಲ್ಲಂತೂ ಎರಡೂ ಪದ್ಧತಿಯ ರುಚಿಗಳು ಮೇಳೈಸಿವೆ. ಒಬ್ಬರನ್ನೊಬ್ಬರು ಆಹ್ವಾನಿಸಿ ಹಬ್ಬದೂಟ ಮಾಡಿಸುವ, ಜೊತೆಯಾಗಿ ಆಲಂಕಾರಿಕ ಬಟ್ಟೆ ತೊಡುವ, ದಾಂಡಿಯಾ– ದುರ್ಗಾಮಾತಾ ದೌಡ್‌ಗಳಲ್ಲಿ ಪಾಲ್ಗೊಳ್ಳುವ ಮನಸ್ಸುಗಳು ಈಗ ಗಡಿಗುಂಟಲೂ ಸಾಗುತ್ತವೆ.

‘ಭಾಷೆಯ ಆಚೆಗೆ ಭಿನ್ನವಿಲ್ಲ’

‘ಭಾಷಾವಾರು ಪ್ರಾಂತ್ಯಗಳ ರಚನೆಗೂ ಮುನ್ನ ನಾವೆಲ್ಲ ಒಂದೇ. ಆಗಿನಿಂದಲೂ ಹಬ್ಬ ಹರಿದಿನಗಳ ಬೆಸುಗೆ ನಡೆದುಬಂದಿದೆ. ಸಮುದಾಯದ ಖುಷಿ, ಸಾಮೂಹಿಕ ಸಂಭ್ರಮ, ಭಾಷಾ ಸುಖಗಳನ್ನು ವಿನಿಮಯ ಮಾಡಿಕೊಳ್ಳುವುದೇ ಹಬ್ಬಗಳ ಉದ್ದೇಶ. ನವರಾತ್ರಿ ನೆಪದಲ್ಲಿ ಭಾಷಿಕ ಮನಸ್ಸುಗಳ ಮಧ್ಯೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಮುಂದುವರಿದಿದ್ದು ಸಂತಸದಾಯಕ’ ಎನ್ನುವುದು ಸಾಹಿತಿ ರಾಮಕೃಷ್ಣ ಮರಾಠೆ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.