ADVERTISEMENT

ಲಾಕ್‌ಡೌನ್ ಕಾಲದಲ್ಲಿ ಮಕ್ಕಳ ಆಟ: ಅಮುಚಿಯ ಸಾಹಸ ಕಥೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 20:00 IST
Last Updated 26 ಮಾರ್ಚ್ 2020, 20:00 IST
ಅಮಯ
ಅಮಯ   

ನಮ್ಮ ಮನೆಯ ನಾಲ್ಕು ವರ್ಷದ ಪುಟಾಣಿ ಅಮಯ ಅಳಿಲಿನಷ್ಟೇ ಚುರುಕು. ಅದಕ್ಕೇ ಅವನನ್ನು ಪ್ರೀತಿಯಿಂದ ‘ಅಮುಚಿ’ ಅಂತಾ ಕರೀತಿವಿ. ಸದಾ ಗಿಣಿಯಂತೆ ಮಾತಾಡುತ್ತಾ ಮನೆ ತುಂಬಾ ಓಡಾಡುವ ಅವನ ಕುತೂಹಲ ತಣಿಸುವುದು ಗೃಹಬಂಧನದ ಸಮಯದಲ್ಲಿ ನಮಗೆಲ್ಲಒಂದು ಪ್ರೀತಿಯ ಸವಾಲೇ ಸರಿ.

ಪುಟ್ಟ ಮಕ್ಕಳಿಗೆ ಹೀಗೆ ಮಾಡು; ಹಾಗೆ ಮಾಡು ಎಂದು ಆಜ್ಞಾಪಿಸುವುದಕ್ಕಿಂತ ಅದ್ಭುತ ಕಥೆಗಳ ರೂಪದಲ್ಲಿ ಹೇಳಿದರೆ ಖಂಡಿತ ಕೇಳುತ್ತಾರೆ. ಹಾಗಾಗಿ ನಾನು ಅವನಿಗೆ ಹೇಳುವ ಆಶು ಕಥೆಗಳಲ್ಲಿ ಅವನೇ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ಎಲ್ಲ. ದೈನಂದಿನ ಚಟುವಟಿಗೆಗಳನ್ನು ಮಾಡಿಸಲು ನನ್ನ ‘ಅಮಯನ ಸಾಹಸ ಗಾಥೆಗಳು’ ಸರಣಿ ಶುರು. ‘ಒಂದೂರಲ್ಲಿ ಅಮಯ ಅಂತ ಒಬ್ಬ ಪುಟಾಣಿ ಇದ್ದನಂತೆ’ ಎಂದು ಶುರು ಮಾಡಿದರೆ ಸಾಕು ತನ್ನ ಕಣ್ಣುಗಳ ಅರಳಿಸಿ ತನ್ಮಯನಾಗಿ ಕೇಳುವ ಅವನಿಗೆ ಕಥೆಯಲ್ಲಿ ಸ್ವಲ್ಪ ಹಾಸ್ಯ, ಸಾಹಸ, ನೀತಿ ಎಲ್ಲ ಬೆರೆಸಿ ಕಣ್ಣಿಗೆ ಕಟ್ಟುವಂತೆ ಹೇಳುವಾಗ, ಗಮನವಿಟ್ಟು ಕೇಳುತ್ತಾ ಪ್ರಶ್ನೆಗಳ ಸುರಿಮಳೆ ಸುರಿಸುವ ಅರಗಿಣಿಗೆ ಸಮಂಜಸ ಉತ್ತರ ಕೊಡುವುದು ಸ್ವಲ್ಪ ಕಠಿಣ.

ಅವನ ಸೃಜನಶೀಲತೆ ಹೆಚ್ಚಿಸಲು ಅವನ ತಂದೆ ಆಯಸ್ಕಾಂತೀಯ ಆಕೃತಿಗಳು, ಬ್ಲಾಕ್ಸ್ ಉಪಯೋಗಿಸಿ ವಿವಿಧ ಮಾದರಿಗಳನ್ನುಮಾಡುವುದನ್ನು ತೋರಿಸಿ ಕೊಟ್ಟಾಗಿನಿಂದ ಮನೆ, ರಸ್ತೆ, ಗಾಡಿಗಳನ್ನು ತಾನೇ ಯೋಚಿಸಿ ಮಾಡುತ್ತಾನೆ. ಬ್ಲಾಕ್ಸ್ ಉಪಯೋಗಿಸಿ ಅವನು ಮಾಡುವ ದೊಡ್ಡ ಕಟ್ಟಡಕ್ಕೆ 'ಬುರ್ಜ್ ಖಲೀಫ' ಅಂತ ಹೆಸರಿಟ್ಟು ಸಂಭ್ರಮಿಸುವಾಗ ನೋಡೋದೇ ಚಂದ.

ADVERTISEMENT

ಕೆಲವೊಮ್ಮೆ ನಾವು ಮಾಡೋ ಕೆಲಸದಲ್ಲೇ ಅವನನ್ನು ತೊಡಗಿಸುತ್ತೇವೆ. ಕಿರಾಣಿ ಪಟ್ಟಿಯನ್ನು ಮಾಡುವಾಗ ಅವನೂ ತನ್ನ ಪೆನ್ಸಿಲ್ ಮತ್ತು ಪುಸ್ತಕ ತಂದು ಎಲ್ಲ ಹಣ್ಣುಗಳ, ತರಕಾರಿಗಳ ಬೆಳೆಕಾಳುಗಳ ಹೆಸರು ಹೇಳುತ್ತಾ ತನ್ನ ಗೂಢ ಲಿಪಿಯಲ್ಲಿ ಬರೆದು ಪಟ್ಟಿ ಮಾಡಿ ತನ್ನ ಪುಟಾಣಿ ಸೈಕಲ್ ನಲ್ಲಿ ಬ್ಯಾಗು ನೇತು ಹಾಕಿಕೊಂಡು ಅಂಗಡಿಯಿಂದ ಸಾಮಾನು ತರುವಂತೆ ಆಡುತ್ತಾನೆ. ಅವನ ಈ ಆಟದಲ್ಲಿ ನಾವು ಅಂಗಡಿಯವರಂತೆ ಅವನು ಚೌಕಾಸಿ ಮಾಡುತ್ತಾ ಕೊಳ್ಳುವವನಂತೆ ನಟಿಸುತ್ತೇವೆ. ಇದರಿಂದ ತರಕಾರಿ ಹಣ್ಣುಗಳ ಬಗ್ಗೆ ಅವನಿಗೆ ಒಲವು ಮೂಡಿರುವುದರಿಂದ ಅವನಿಗೆ ತಿಂಡಿ ಊಟ ಮಾಡಿಸುವ ಕೆಲಸ ಸುಲಭ.

ಮತ್ತೆ ಕೆಲವೊಮ್ಮೆ ತೋಟದ ಮಾಲಿಯ ಆಟವಾಡುತ್ತಾ ತನ್ನ ಪ್ರೀತಿಯ ಸ್ಟ್ರಾಬೆರಿ ಗಿಡಕ್ಕೆ ನೀರು ಹಾಕುತ್ತಾನೆ. ತನ್ನ ಮುದ್ದು ಮಾತಿನಿಂದ ಅದನ್ನು ತನ್ನ ಗೆಳೆಯನಾಗಿ ಮಾಡಿಕೊಂಡು ಮಾತಾಡುತ್ತಾ ಅದರ ಕಾಳಜಿ ಮಾಡುತ್ತಾನೆ. ಸದಾ ಒಂದಿಲ್ಲೊಂದು ಆಟದಿಂದಲೇ ಹೊಸ ವಿಷಯಗಳನ್ನು ಕಲಿಯುತ್ತಿರುವ ನಮ್ಮ ಅಮಯನಿಗೆ ಬೇಜಾರು ಅನ್ನೋದೇ ಇಲ್ಲ.

ಹೀಗೆ ಮಕ್ಕಳ ಅದಮ್ಯ ಉತ್ಸಾಹ, ಕುತೂಹಲಗಳನ್ನು ಪ್ರೋತಾಹಿಸಿ ಆಟಗಳಿಂದ ಕಲಿಸುತ್ತಾ, ಕಲ್ಪನೆಗಳಿಗೆ ರೆಕ್ಕೆಕೊಟ್ಟು, ಕ್ರಿಯಾಶೀಲತೆಯನ್ನು ಹೆಚ್ಚಿಸುವುದರೆಡೆಗೆ ತಂದೆ ತಾಯಂದಿರು ಗಮನ ಕೊಟ್ಟರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಹಾಗೂ ಮಕ್ಕಳಿಗೆ ರಜೆಯೂ ಸಜೆಯಾಗದೆ ಮಜವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.