ADVERTISEMENT

ನಾಯಿಗಳಿಗೆ ನೀಲಿ ಬಣ್ಣದ ನೀರಿನ ಭೀತಿ!

ಹೋಟೆಲ್‌, ಮನೆಗಳ ಮುಂದೆ ‌ಬಾಟಲಿಗಳಲ್ಲಿ ನೀರು ತುಂಬಿಡುತ್ತಿರುವ ಜನ

ಶರತ್‌ ಎಂ.ಆರ್‌.
Published 5 ಮಾರ್ಚ್ 2020, 5:08 IST
Last Updated 5 ಮಾರ್ಚ್ 2020, 5:08 IST
ಮಂಡ್ಯ ಅಶೊಕನಗರದ 3ನೇ ಅಡ್ಡರಸ್ತೆಯ ಮೊಬೈಲ್‌ ಕ್ಯಾಂಟೀನ್‌ ಸುತ್ತ ನೀಲಿ ಬಾಟಲಿಗಳನ್ನು ಇಟ್ಟಿರುವುದು
ಮಂಡ್ಯ ಅಶೊಕನಗರದ 3ನೇ ಅಡ್ಡರಸ್ತೆಯ ಮೊಬೈಲ್‌ ಕ್ಯಾಂಟೀನ್‌ ಸುತ್ತ ನೀಲಿ ಬಾಟಲಿಗಳನ್ನು ಇಟ್ಟಿರುವುದು   

ಮಂಡ್ಯ: ನಾಯಿಗಳ ಹಾವಳಿಯಿಂದ ಮುಕ್ತಿ ಪಡೆಯಲು ಹೊಸವಿಧಾನ ಕಂಡುಕೊಂಡಿದ್ದು ನಗರದ ಮನೆ, ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಬಾಟಲಿ, ಕ್ಯಾನ್‌ನಂತಹ ಪಾರದರ್ಶಕ ವಸ್ತುಗಳಲ್ಲಿ ನೀಲಿ ಬಣ್ಣದ ನೀರು ತುಂಬಿಡುತ್ತಿದ್ದಾರೆ.

ಮನೆ, ಕಚೇರಿ, ಅಂಗಡಿಗಳ ಮುಂದೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಾಯಿಗಳ ನಿಯಂತ್ರಣಕ್ಕೆ ತಾವೇ ಈ ಮಾರ್ಗ ಕಂಡುಕೊಂಡಿದ್ದಾರೆ.

‘ತೆಳು ಹಾಗೂ ಕಡು ನೀಲಿ ದ್ರಾವಣಗಳನ್ನು ಬಾಟಲಿಗಳಲ್ಲಿ ತುಂಬಿಸಿ ಮನೆ, ಅಂಗಡಿಗಳ ಮುಂದೆ ಇಡುವ ಮೂಲಕ ಈ ಸಮಸ್ಯೆ ತಪ್ಪಿದೆ. ನಾಯಿಗಳ ಕಣ್ಣುಗಳು ನೀಲಿ ಬಣ್ಣಕ್ಕೆ ಅಂಜುತ್ತವೆ’ ಎಂಬುದು ಸ್ಥಳೀಯರ ಪ್ರತಿಪಾದನೆ.

ADVERTISEMENT

ಅಶೋಕ ನಗರ, ಸುಭಾಷನಗರ, ಚಾಮುಂಡೇಶ್ವರ ನಗರ, ಕ್ರಿಶ್ಚಿಯನ್‌ ಕಾಲೊನಿ, ಆಸ್ಪತ್ರೆ ರಸ್ತೆ, ಶಂಕರಪುರ ಸೇರಿದಂತೆ ಹಲವೆಡೆ ನೀಲಿ ಬಣ್ಣದ ನೀರಿನ ಬಾಟಲಿಗಳನ್ನು ಕಾಣಬಹುದು. ಉಳಿದ ಬಡಾವಣೆಗಳ ಜನರೂ ಅದನ್ನು ಅನುಕರಿಸುತ್ತಿದ್ದಾರೆ.

ಪ್ರಮುಖವಾಗಿ ಮಾಂಸಾಹಾರ ವ್ಯಾಪಾರ ಮಾಡುವವರು ಮೊಬೈಲ್‌ ಕ್ಯಾಂಟೀನ್‌ ಸುತ್ತ ಇಂಥ ಬಾಟಲಿಗಳನ್ನು ಇಡುವುದು ಹೆಚ್ಚುತ್ತಿದೆ. ಬಾಟಲಿ ಇಟ್ಟಿರುವ ಪರಿಧಿಯಿಂದ ನಾಯಿಗಳು ಹೊರಗೆ ಇರುತ್ತವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕಿರಾಣಿ ಅಂಗಡಿಗಳಲ್ಲಿ ಉಜಾಲಾವನ್ನು ನೀರಿಗೆ ಮಿಶ್ರಣ ಮಾಡಿ ಇಡುತ್ತಿದ್ದಾರೆ. ಆದರೆ, ಬೀದಿನಾಯಿಗಳು ಅವುಗಳ ಮುಂದೆಯೇ ಕೂರುವುದು, ಮೂಸಿ ನೋಡುವುದನ್ನು ಮಾಡುತ್ತಿವೆ.

‘ಪಕ್ಕದ ಮನೆಯವರನ್ನು ಅನುಕರಿಸಿ ನನ್ನ ಕಾರಿನ ಮುಂದೆ ಇಂತಹ ನಾಲ್ಕು ಬಾಟಲಿ ಇರಿಸಿದ್ದೆ. ಆದರೆ, ನಾಯಿಗಳು ಕುತೂಹಲದಿಂದ ಬಾಟಲಿ ಬಳಿ ಬರುತ್ತವೆ. ಚಕ್ರಗಳಿಗೆ ಮೂತ್ರ ವಿಸರ್ಜಿಸಿ ಹೋಗುತ್ತಿವೆ. ಏನೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಥಾಮಸ್‌‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.