ADVERTISEMENT

ಕಡಿಮೆ ಅಂಕ: ವಿದ್ಯಾರ್ಥಿಗಳಲ್ಲಿ ಖಿನ್ನತೆ, ಒತ್ತಡ

ಉತ್ತಮ ಶೈಕ್ಷಣಿಕ ನಿರ್ವಹಣೆ ತೋರಿದವರಲ್ಲಿ ನಿರಾಳ ಭಾವ: ನಿಮ್ಹಾನ್ಸ್‌ ಅಧ್ಯಯನ ವರದಿ

ಎಸ್.ರವಿಪ್ರಕಾಶ್
Published 8 ಮೇ 2019, 20:19 IST
Last Updated 8 ಮೇ 2019, 20:19 IST

ಬೆಂಗಳೂರು: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂಬ ಒತ್ತಡ ವಿದ್ಯಾರ್ಥಿಗಳನ್ನು ಅಪಾಯದಂಚಿಗೆ ದೂಡುತ್ತಿದೆ. ಅದರಲ್ಲೂ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡುತ್ತಿರುವವರು ಅಧಿಕ ಮನೋಒತ್ತಡಕ್ಕೆ ಸಿಲುಕುತ್ತಿದ್ದಾರೆ.

ವಿಶೇಷವಾಗಿ, ಹೈಸ್ಕೂಲ್‌ ಮಕ್ಕಳಲ್ಲಿ ಮನೋ ಒತ್ತಡದ ಪ್ರವೃತ್ತಿ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿದೆ. ನಿಮ್ಹಾನ್ಸ್‌ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಇಂಡಿಯನ್‌ ಸೈನ್ಸ್‌ ವೈರ್‌ ವರದಿ ಮಾಡಿದೆ.

ಶಾಲೆಗಳಲ್ಲಿ ಮಕ್ಕಳಿಗೆ ವರ್ಷವಿಡೀ ಪಠ್ಯಪುಸ್ತಕ ಅಥವಾ ಗೈಡ್‌ಗಳನ್ನು ಉರು ಹೊಡೆಸಿ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತದೆ. ಬೋಧನೆ ಸಂದರ್ಭದಲ್ಲೂ ಕೌಶಲದಿಂದ ಕೂಡಿದ ಕಲಿಕೆಗಿಂತ ಪಠ್ಯ ಆಧರಿಸಿದ ಬೋಧನೆಗೇ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ADVERTISEMENT

ಮಾನಸಿಕ ಮತ್ತು ದೈಹಿಕ ದುಷ್ಪರಿಣಾಮಕ್ಕೂ ಗುರಿಯಾಗುತ್ತಿರುವುದನ್ನು ನಿಮ್ಹಾನ್ಸ್‌ನ ಮನೋತಜ್ಞರು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಒತ್ತಡದ ಮಟ್ಟವನ್ನು ಅಳೆಯುವ ಉದ್ದೇಶದಿಂದ 20 ಹೈಸ್ಕೂಲ್‌ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇವರಲ್ಲಿ 10 ಮಂದಿ ಉನ್ನತ ರ‍್ಯಾಂಕಿಂಗ್‌ ಪಡೆದವರು, ಉಳಿದವರು ಶೈಕ್ಷಣಿಕವಾಗಿ ಕಡಿಮೆ ನಿರ್ವಹಣೆ ತೋರಿದವರು.

ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ‘ಒತ್ತಡ ಗ್ರಹಿಕೆಯ ಮಾಪನ ಪರೀಕ್ಷೆ’, ವಿದ್ಯಾರ್ಥಿಗಳ ಮಿದುಳಿನ ವಿದ್ಯುತ್ ಹರಿವಿನ ಚಟುವಟಿಕೆ ಗಮನಿಸುವ ಎಲೆಕ್ಟ್ರೊಎನ್ಸೆಫೆಲೊಗ್ರಫಿ ಪರೀಕ್ಷೆಗೂ (ಇಇಜಿ) ಒಳಪಡಿಸಲಾಯಿತು. ಇವೆರಡೂ ಪರೀಕ್ಷೆಗಳ ಮೂಲಕ ಅಂಕಿ– ಅಂಶಗಳನ್ನು ಸಂಗ್ರಹಿಸಲಾಯಿತು. ಇಇಜಿಯಿಂದ ಮಿದುಳಿನ ನಿರ್ದಿಷ್ಟ ಭಾಗದಲ್ಲಿ ಆಗುವ ವಿದ್ಯುತ್‌ ಹರಿವಿನ ವ್ಯತ್ಯಯದ ಪ್ರತಿಕ್ರಿಯೆಯನ್ನೂ ಗಮನಿಸಲಾಯಿತು.

ಉತ್ತಮ ಶೈಕ್ಷಣಿಕ ನಿರ್ವಹಣೆ ತೋರಿದವರಲ್ಲಿ ನಿರಾಳತೆಯ ಭಾವ ಅಧಿಕವಾಗಿದ್ದರೆ, ಕಡಿಮೆ ಶೈಕ್ಷಣಿಕ ನಿರ್ವಹಣೆ ತೋರಿದವರಲ್ಲಿ ಖಿನ್ನತೆ, ಒತ್ತಡ ಹೆಚ್ಚು ಕಂಡು ಬಂದಿತ್ತು ಎನ್ನುತ್ತಾರೆ ಅಧ್ಯಯನ ತಂಡದ ಮುಖ್ಯಸ್ಥೆ ಡಾ.ಜಮುನಾ ರಾಜೇಶ್ವರನ್.

ಈ ಅಧ್ಯಯನ ವರದಿಯನ್ನು ‘ಇಂಡಿಯನ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಸೈಕಾಲಜಿ’ ವಿಸ್ತೃತವಾಗಿ ಪ್ರಕಟಿಸಿದೆ.

ಯಾರ ಮಿದುಳು ಹೇಗಿರುತ್ತದೆ?
ಉತ್ತಮ ಶೈಕ್ಷಣಿಕ ನಿರ್ವಹಣೆ ತೋರಿದವರಲ್ಲಿ ಅಧಿಕ ಆಲ್ಫಾ (ಶೇ 63.83) ಮತ್ತು ಕಡಿಮೆ ಬೀಟಾ ( ಶೇ 36.17), ಕಡಿಮೆ ಶೈಕ್ಷಣಿಕ ನಿರ್ವಹಣೆ ತೋರಿದವರಲ್ಲಿ ಕಡಿಮೆ ಆಲ್ಫಾ (ಶೇ 37.5) ಮತ್ತು ಅಧಿಕ ಬೀಟಾ (ಶೇ 62.5) ಚಟುವಟಿಕೆ ಕಂಡು ಬಂದಿದೆ.

ಯಾವ ವ್ಯಕ್ತಿಯಲ್ಲಿ ನಿರಾಳತೆ ಇರುತ್ತದೆಯೋ ಅವರ ಮಿದುಳಿನಲ್ಲಿ ಆಲ್ಫಾ ಚಟುವಟಿಕೆ ಅಧಿಕವಾಗಿರುತ್ತದೆ. ಬೀಟಾದಲ್ಲಿ ಪ್ರಜ್ಞಾಪೂರ್ವಕ ಆಲೋಚನೆ ಮತ್ತು ತಾರ್ಕಿಕ ಚಿಂತನೆ ಇರುತ್ತದೆ. ಅಲ್ಲದೆ, ಇದರಲ್ಲಿ ಪ್ರಚೋದಕ ಪರಿಣಾಮವೂ ಹೆಚ್ಚು. ಹೀಗಾಗಿ ಉದ್ವಿಗ್ನಗೊಳ್ಳುವುದು, ಖಿನ್ನತೆ ಮತ್ತು ಒತ್ತಡ ಅಧಿಕವಾಗಿರುತ್ತದೆ.

**

ಶಾಲೆಗಳಲ್ಲಿ ಮಕ್ಕಳಿಗಾಗಿ ಖಿನ್ನತೆ ಮತ್ತು ಒತ್ತಡ ನಿರ್ವಹಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
-ಡಾ.ಜಮುನಾ ರಾಜೇಶ್ವರನ್, ಕ್ಲಿನಿಕಲ್‌ ನ್ಯೂರೋಸೈಕಾಲಜಿ ವಿಭಾಗದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.