ADVERTISEMENT

ಧ್ವನಿ ಎತ್ತಿದರೆ ಕಠಿಣ ಕ್ರಮ: ಅಕ್ಕಲಕೋಟೆ ಕನ್ನಡಿಗರಿಗೆ ಮಹಾರಾಷ್ಟ್ರ ಬೆದರಿಕೆ

‘ರಾಜ್ಯ ದ್ರೋಹ’ದ ಎಫ್‌ಐಆರ್‌: ಎಚ್ಚರಿಕೆ

ರಾಜೇಶ್ ರೈ ಚಟ್ಲ
Published 9 ಜನವರಿ 2023, 19:46 IST
Last Updated 9 ಜನವರಿ 2023, 19:46 IST
ಸೋಮಶೇಖರ್ ಜಮಶೆಟ್ಟಿ
ಸೋಮಶೇಖರ್ ಜಮಶೆಟ್ಟಿ   

ಬೆಂಗಳೂರು: ಕನ್ನಡಪರ ಘೋಷಣೆ ಕೂಗಿದ ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕಿನ 17 ಕನ್ನಡಿಗರಿಗೆ ನೋಟಿಸ್‌ ನೀಡಿರುವ ಸ್ಥಳೀಯ ಪೊಲೀಸರು, ಈ ನಡವಳಿಕೆ ಮುಂದುವರಿಸಿದರೆ ‘ರಾಜ್ಯ ದ್ರೋಹ’ ಆರೋಪ ಹೊರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ತಾಲ್ಲೂಕಿನ ಉಡಗಿ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಖಾಸಗಿ ಕನ್ನಡ ಶಾಲೆಯ ಸಿಬ್ಬಂದಿಯನ್ನು ಶಾಲಾಡಳಿತ ಅಮಾನತು ಮಾಡಿದೆ. ಜತ್ತ ತಾಲ್ಲೂಕಿನಲ್ಲಿ ಕನ್ನಡ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರಿಗೆ ನೋಟಿಸ್‌ ನೀಡಲಾಗಿದೆ.

ಡಿಸೆಂಬರ್‌ನಲ್ಲಿ ಗಡಿ ವಿವಾದ ಭುಗಿಲೇಳುತ್ತಿದ್ದಂತೆ ಸೊಲ್ಲಾಪುರ ಜಿಲ್ಲೆಯ ವಿವಿಧೆಡೆ ಕನ್ನಡ ಸಂಘಟನೆಗಳು ಕರ್ನಾಟಕವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದವು.‌ ಪ್ರತಿಭಟನೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ADVERTISEMENT

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್‌ ಅವರಿಗೆ ಪತ್ರ ಬರೆದಿರುವ ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗ, ‘ಅಕ್ಕಲಕೋಟೆ, ಜತ್ತ‌ ಕನ್ನಡಿಗರ ಮೇಲೆ ಇಲ್ಲಿನ ಸರ್ಕಾರ ಕ್ರಮಕ್ಕೆ ಮುಂದಾಗಿರುವುದು ಈ ಭಾಗದಲ್ಲಿ ಭೀತಿ ಹುಟ್ಟಿಸಿದೆ. ಹೀಗಾಗಿ ಎರಡೂ ರಾಜ್ಯಗಳ (ಕರ್ನಾಟಕ– ಮಹಾರಾಷ್ಟ್ರ) ಮುಖ್ಯಮಂತ್ರಿಗಳ ಸಭೆ ಏರ್ಪಡಿಸಿ, ಅನ್ಯಾಯ ಆಗದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ಇತರರ ಮೇಲೆ ದಾಖಲಾಗಿರುವ ದೂರುಗಳನ್ನು ಹಿಂಪಡೆಯಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಮನವಿ ಮಾಡಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ‘ಅಕ್ಕಲಕೋಟೆಯ ಉಡಗಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕರ್ನಾಟಕಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ 17 ಜನರ ಹೆಸರು ಮರಾಠಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅವರಿಲ್ಲರಿಗೂ ನೋಟಿಸ್‌ ನೀಡಿರುವ ಪೊಲೀಸರು, ‘ಇಲ್ಲಿ ಯಾಕೆ ಕನ್ನಡ ಪರ ಘೋಷಣೆ ಕೂಗಿದ್ದೀರಿ, ಧ್ವಜ ಹಾರಿಸಿದ್ದೀರಿ. ಇದೇ ರೀತಿ ಮುಂದುವರಿದರೆ ರಾಜ್ಯ ದ್ರೋಹದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದರು.

ಅಮಾನತಿನ ಅಸ್ತ್ರ ಬಳಕೆ
ಕರ್ನಾಟಕ ರಕ್ಷಣಾ ವೇದಿಕೆಯ ಸೊಲ್ಲಾಪುರ ಜಿಲ್ಲಾ ಘಟಕದ ಅಧ್ಯಕ್ಷ, ಭಾಷಾ ಅಲ್ಪಸಂಖ್ಯಾತ ಶಾಲೆಯಾದ ಅಕ್ಕಲಕೋಟೆಯ ಹೈದ್ರಾ ಪ್ರಶಾಲಾದ ‘ಡಿ’ ದರ್ಜೆಯ ನೌಕರ ಕರ್ಪೆ ಮಲ್ಲಿನಾಥ ಶರಣಪ್ಪ ಎಂಬುವವರನ್ನು ಶಾಲಾ ಆಡಳಿತ ಜ. 2ರಂದು ಅಮಾನತು ಮಾಡಿದೆ. ಉಡಗಿ ಗ್ರಾಮದಲ್ಲಿ ಸುಮಾರು 20 ಮಂದಿಯೊಂದಿಗೆ ಡಿ. 2ರಂದು ಮಧ್ಯಾಹ್ನ ಪ್ರತಿಭಟನೆ ನಡೆಸುವ ಮೂಲಕ ಮಹಾರಾಷ್ಟ್ರ ಸರ್ಕಾರದ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಕ್ಕಲಕೋಟೆ ಪೊಲೀಸರು, ನೌಕರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೊಲ್ಲಾಪುರ ಜಿಲ್ಲಾ ಪರಿಷತ್‌ನ ಶಿಕ್ಷಣಾಧಿಕಾರಿ (ಮಾಧ್ಯಮಿಕ) ಪತ್ರ ಬರೆದಿತ್ತು. ಪೊಲೀಸರ ಸೂಚನೆಯಂತೆ‌ ಹೈದ್ರಾ ಪ್ರಶಾಲಾದ ಆಡಳಿತ ಮಂಡಳಿಗೆ ಶಿಕ್ಷಣಾಧಿಕಾರಿ ನೋಟಿಸ್‌ ನೀಡಿದ್ದರು.

*
ಬೆಳಗಾವಿ ಗಡಿ ವಿವಾದ ಭುಗಿಲೆದ್ದ ಬಳಿಕ ಅಕ್ಕಲಕೋಟೆ, ಜತ್ತದ ಕನ್ನಡಿಗರ ಮೇಲೆ ಮಹಾರಾಷ್ಟ್ರ ಸರ್ಕಾರದ ದೌರ್ಜನ್ಯ ಹೆಚ್ಚಿದೆ. ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಬೇಕು.
-ಸೋಮಶೇಖರ್ ಜಮಶೆಟ್ಟಿ, ಅಧ್ಯಕ್ಷ, ಕಸಾಪ ಮಹಾರಾಷ್ಟ್ರ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.