ADVERTISEMENT

ಮುಂದುವರಿದ ಮುಷ್ಕರ: ರಸ್ತೆಗೆ ಇಳಿದ ಕೆಲವೇ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 4:03 IST
Last Updated 12 ಡಿಸೆಂಬರ್ 2020, 4:03 IST
   

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಶನಿವಾರವೂ ಮುಂದುವರಿದಿದ್ದು, ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆಯೂ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯ ಕೆಲ ಬಸ್‌ಗಳು ರಸ್ತೆಗೆ ಇಳಿದಿವೆ.

ಕೆಎಸ್‌ಆರ್‌ಟಿಸಿಯ 93 ಮತ್ತು ಬಿಎಂಟಿಸಿಯ 55 ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಮಂಗಳೂರು ವಿಭಾಗದಲ್ಲಿ 87, ಶಿವಮೊಗ್ಗದಲ್ಲಿ 3, ದಾವಣಗೆರೆ 2 ಮತ್ತು ಚಿತ್ರದುರ್ಗ ವಿಭಾಗದಿಂದ 1 ಬಸ್ ಕಾರ್ಯಾಚರಣೆ ಮಾಡಿದೆ. ಬೆಳಿಗ್ಗೆ 8ರ ವೇಳೆಗೆ ಉಳಿದ ವಿಭಾಗಗಳಲ್ಲಿ ಯಾವುದೇ ಬಾಸ್ ಕಾರ್ಯಾಚರಣೆ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಮುಷ್ಕರ ವಿರೋಧಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ಜತೆಗೆ ನಿರ್ವಾಹಕ ಮತ್ತು ಚಾಲಕ ಹುದ್ದೆಯಿಂದ ಸಂಚಾರ ನಿಯಂತ್ರಕ(ಟಿ.ಸಿ) ಹುದ್ದೆಗೆ ಬಡ್ತಿ ಹೊಂದಿದವರನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ಸಂಸ್ಥೆಯ ಸಿಬ್ಬಂದಿ ಅಲ್ಲದ ಖಾಸಗಿ ಚಾಲಕರನ್ನು ಕರೆತಂದು ಬಸ್‌ ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ನೌಕರರ ಜತೆ ಮಾತುಕತೆ ನಡೆಸಿ ಅಥವಾ ಬೇಡಿಕೆ ಈಡೇರಿಸಿ ವಿಶ್ವಾಸ ಗಳಿಸುವ ಬದಲು ಸರ್ಕಾರ ವಾಮಮಾರ್ಗ ಹಿಡಿದಿದೆ. ಖಾಸಗಿ ಚಾಲಕರಿಂದ ಅಪಘಾತ ಸಂಭವಿಸಿ ಸಾವು–ನೋವುಗಳು ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಪ್ರತಿಭಟನಾನಿರತ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.