ADVERTISEMENT

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಐದು ದಿನಗಳ ನಂತರ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 7:14 IST
Last Updated 21 ಆಗಸ್ಟ್ 2019, 7:14 IST
   

ರಾಯಚೂರು: ನಗರದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವು ಜನಮಾನಸದಿಂದ ಮರೆತುಹೋಗುವ ಮುನ್ನವೇ, ಅದೇ ಶಿಕ್ಷಣ ಸಂಸ್ಥೆಯ ಅರೆವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾದ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ.

ರಾಯಚೂರು ತಾಲ್ಲೂಕಿನ ಗಣಮೂರು ಗ್ರಾಮದ 17 ವಯಸ್ಸಿನ ಈ ವಿದ್ಯಾರ್ಥಿನಿಯು ಎಸ್ಸೆಸ್ಸೆಲ್ಸಿ ನಂತರ ಅರೆವೈದ್ಯಕೀಯ ಕಲಿಯುತ್ತಿದ್ದರು. ಗ್ರಾಮದಿಂದ ನಿತ್ಯ ಕಾಲೇಜಿಗೆ ಬಂದು ಹೋಗುತ್ತಿದ್ದ ವಿದ್ಯಾರ್ಥಿನಿ ಆಗಸ್ಟ್ 16 ರಂದು ಮನೆಯಿಂದ ಹೊರಬಂದು, ವಾಪಸಾಗಿರಲಿಲ್ಲ. ಪಾಲಕರು ಎರಡು ದಿನ ಹುಡುಕಿದ ನಂತರ, ಅಸಹಾಯಕರಾಗಿ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದರು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆಯೂ ದೂರಿನಲ್ಲಿ ಹೇಳಿದ್ದರು.

ದೂರು ದಾಖಲಾದ ಎರಡು ದಿನಗಳ ಬಳಿಕ ಆಂಧ್ರಪ್ರದೇಶದ ಕರ್ನೂಲ್ ಬಳಿ ತುಂಗಭದ್ರಾ ನದಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ವಿದ್ಯಾರ್ಥಿನಿಯ ಬ್ಯಾಗ್, ಏಪ್ರಾನ್ ಹಾಗೂ ಇತರೆ ಗುರುತಿನ ಚೀಟಿಗಳು ಮಂತ್ರಾಲಯ ಸಮೀಪ ತುಂಗಭದ್ರಾ ನದಿಯ ಸೇತುವೆ ಮೇಲೆ ಪತ್ತೆಯಾಗಿವೆ.

ADVERTISEMENT

ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಸಂಬಂಧವಾಗಿ ಮೃತ ವಿದ್ಯಾರ್ಥಿನಿ ಗ್ರಾಮದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಬಂಧಿತ ಯುವಕ ಅಟೋ ಡ್ರೈವರ್. ತನಿಖೆ ಮುಂದುವರಿದಿದೆ.

ವಿಶ್ವಕರ್ಮ ಸಮಾಜ ಕಳವಳ

ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಸಾವಿನ ಪ್ರಕರಣದ ಬಗ್ಗೆ ಉನ್ನತ ತನಿಖೆಗೆ ಒತ್ತಾಯಿಸುತ್ತಿದ್ದ ವಿಶ್ವಕರ್ಮ ಸಮಾಜಕ್ಕೆ, ಈಗ ಮತ್ತೊಂದು ಘಟನೆ ನಡೆದಿರುವುದು ಆಘಾತವನ್ನುಂಟು ಮಾಡಿದೆ ಎಂದು ಸಮಾಜದ ಮುಖಂಡ ಮಾರುತಿ ಬಡಿಗೇರ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.