ಕರ್ನಾಟಕ ಹೈಕೋರ್ಟ್
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ, ‘ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ‘ಗಳನ್ನು (ಎಸ್‌ಜಿಆರ್‌ಸಿ) ರಚಿಸಲು ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ಒಂದು ವಾರ ಗಡುವು ನೀಡಿದೆ.
ಈ ಸಂಬಂಧ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ಮೂರನೇ ವರ್ಷದ ಕಾನೂನು ಪದವಿ ವಿದ್ಯಾರ್ಥಿ ಕೆ.ಎನ್.ಪ್ರಣವ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕಾನೂನು ವಿಶ್ವವಿದ್ಯಾಲಯ ಪರ ವಕೀಲರು, ಎಸ್‌ಜಿಆರ್‌ಸಿ ರಚನೆಗೆ ಸಂಬಂಧಿಸಿದ್ದು ಎಂದು 2024ರ ಅಧಿಸೂಚನೆಯೊಂದನ್ನು ಹಾಜರುಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ‘ಸರ್ಕಾರಿ ವಕೀಲರು ಸಲ್ಲಿಸಿರುವುದು ವಿದ್ಯಾರ್ಥಿಗಳ ಕಲ್ಯಾಣ ಸಮಿತಿಗೆ ಸಂಬಂಧಿಸಿದ ಅಧಿಸೂಚನೆಯೇ ಹೊರತು ಎಸ್‌ಜಿಆರ್‌ಸಿ ಅಲ್ಲ‘ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಕೆರಳಿದ ನ್ಯಾಯಮೂರ್ತಿ ಅವರು, ‘ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದೀರಾ? ರಿಜಿಸ್ಟ್ರಾರ್ ಅವರನ್ನು ಕೋರ್ಟ್‌ಗೆ ಕರೆಯಿಸಬೇಕಾಗುತ್ತದೆ. ರಿಜಿಸ್ಟ್ರಾರ್ ಅವರ ಈ ನಡವಳಿಕೆಯನ್ನು ದಾಖಲಿಸಬೇಕಾ’ ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿದರು.
ವಿವರಣೆ ನೀಡಲು ಕಾಲಾವಕಾಶ ಕೋರಿದ ಸರ್ಕಾರಿ ವಕೀಲರು ನಂತರ ಹಾಜರಾಗಿ, ‘ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿರ್ದೇಶನದ ಪ್ರಕಾರ ಎಸ್‌ಜಿಆರ್‌ಸಿ ರಚನೆ ಮಾಡಿಲ್ಲ. ಅದಕ್ಕಾಗಿ ಒಂದು ವಾರ ಕಾಲಾವಕಾಶಬೇಕು ನೀಡಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಯವರು, ‘ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲಾಗಿಲ್ಲ ಎಂದರೆ ಏನರ್ಥ? ಒಂದು ವಾರದಲ್ಲಿ ಸಮಿತಿಗಳನ್ನು ರಚಿಸಿ. ಪುನಃ ಸಮಯ ಕೊಡುವುದಿಲ್ಲ. ಒಂದು ವೇಳೆ ರಚನೆ ಮಾಡದೇ ಹೋದರೆ ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.