ADVERTISEMENT

‘ಒಂದು ಯುದ್ಧ ಗೆದ್ದೆವು, ಇನ್ನೊಂದು ಗೆಲ್ಲಬೇಕಿದೆ’ ಉಕ್ರೇನ್‌ನಿಂದ ಮರಳಿದ ಶಿಲ್ಪ

ಭಾರತಕ್ಕೆ ವಾ‍ಪಸ್ಸಾದ ಸಾಗರದ ವಿದ್ಯಾರ್ಥಿನಿಯ ಮನದಾಳ

ಸುಕೃತ ಎಸ್.
Published 6 ಮಾರ್ಚ್ 2022, 20:24 IST
Last Updated 6 ಮಾರ್ಚ್ 2022, 20:24 IST
ಶಿಲ್ಪ
ಶಿಲ್ಪ   

ಬೆಂಗಳೂರು: ‘ಒಂದು ಯುದ್ಧ ಗೆದ್ದು ಬಂದೆವು. ಆದರೆ, ಇಲ್ಲಿಗೆ ಬಂದು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳನ್ನು ನೋಡಿದರೆ ನಾವು ಇನ್ನೊಂದು ಯುದ್ಧ ಗೆಲ್ಲಬೇಕಿದೆ ಎನ್ನುವುದು ತಿಳಿಯಿತು.’

– ಇದು ಯುದ್ಧಪೀಡಿತ ಉಕ್ರೇನ್‌ನ ಕ್ರೊಪೊವಿನಿಟ್‌ಸ್ಕಿ ನಗರದಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಶಿಲ್ಪಾ ರಾಡ್ರಿಗಸ್‌ ಅವರ ಮಾತುಗಳು.

ಸರ್ಕಾರ ಮತ್ತು ರಾಯಭಾರ ಕಚೇರಿ ಸಹಾಯ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ವಿಡಿಯೊಗಳನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳನ್ನು ‘ಗುಳ್ಳೆನರಿ’, ‘ಕೃತಘ್ನರು’ ಎಂದೆಲ್ಲಾ ಹೇಳಿ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಕುರಿತು ಶಿಲ್ಪಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ADVERTISEMENT

‘‌ಅಲ್ಲಿ ಸಿಲುಕಿದ್ದ, ಸಿಲುಕಿರುವ ಯಾವ ವಿದ್ಯಾರ್ಥಿಯೂ ಭಾರತ ಬೇಡ ಎಂದು ಹೇಳಿಲ್ಲ. ನಮ್ಮ ಕಷ್ಟದ ಸಮಯದಲ್ಲಿ, ಸಹಾಯ ಮಾಡಬೇಕಾದ ಜವಾಬ್ದಾರಿ ಇದ್ದರೂ, ಸರ್ಕಾರ ನಮ್ಮ ಸಹಾಯಕ್ಕೆ ಬರಲಿಲ್ಲ ಎಂದು ಹೇಳಿದೆವಷ್ಟೆ. ಇದನ್ನು ದೊಡ್ಡವರು ಅರ್ಥ ಮಾಡಿಕೊಳ್ಳಬೇಕು. ವಿವೇಕವೇ ಇಲ್ಲದೆ ನಮ್ಮ ಬಗ್ಗೆ ಟ್ರೋಲ್‌ ಮಾಡುವ, ನಮ್ಮನ್ನು ಬೈದು ವಿಡಿಯೊಗಳನ್ನು ಮಾಡುವವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಅಲ್ಲಿಗೆ ಹೋಗಿದ್ದು ಓದುವುದಕ್ಕೆ. ಹಣ ಮಾಡುವುದಕ್ಕೆ ಅಲ್ಲ. ನನಗೆ ಭಾರತದ ಮೇಲೆ ಅಭಿಮಾನವಿದೆ. ಓದು ಮುಗಿಸಿ ಇಲ್ಲಿಯೇ ಬಂದು ಕೆಲಸ ಮಾಡಬೇಕು ಎನ್ನುವ ಆಸೆಯೂ ಇದೆ. ಇಲ್ಲಿನ ವೈದ್ಯಕೀಯ ಕಾಲೇಜುಗಳು ಕೇಳಿದಷ್ಟು ದುಬಾರಿ ಹಣ ಕಟ್ಟಲು ಸಾಧ್ಯವಾಗದ ಕಾರಣ ಅಲ್ಲಿಗೆ ಓದುವ ಉದ್ದೇಶದಿಂದ ಹೋದೆ. ಒಳ್ಳೆಯ ಅಂಕ ಪಡೆಯುವ ಯೋಗ್ಯತೆ ಇಲ್ಲ ಎನ್ನುವ ಮಾತುಗಳನ್ನು ನಮ್ಮ ಕುರಿತು ಆಡಲಾಯಿತು. ಹಾಗಾದರೆ, ಕಡಿಮೆ ಅಂಕ ಪಡೆದು ₹4 ಕೋಟಿಯಿಂದ ₹5 ಕೋಟಿ ಕೊಟ್ಟು ಭಾರತದಲ್ಲಿಯೇ ಸಾವಿರಾರು ಮಂದಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಯೋಗ್ಯತೆ ಇದೆ ಎಂದಮೇಲೆ, ನಾವು ಓದುವುದು ತಪ್ಪೇ. ಶ್ರೀಮಂತರು ಮಾತ್ರ ಓದಬೇಕೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.