ADVERTISEMENT

ಸಚಿವರ ಗುಂಪಿನಲ್ಲೇ ‘‍‍ಪಕ್ಕೆಲುಬು’ ವಿಡಿಯೊ: ಶಿಕ್ಷಕನ ವಿರುದ್ಧ ಕ್ರಮಕ್ಕೆ ಸೂಚನೆ

ವೈರಲ್‌ ಆದ ಬಳಿಕ ಶಿಕ್ಷಕನಿಗೆ ಶಿಕ್ಷೆ ವಿಧಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 2:51 IST
Last Updated 10 ಜನವರಿ 2020, 2:51 IST
ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಶೇರ್ ಮಾಡಿರುವ ವಿಡಿಯೊ ತುಣುಕು ಮತ್ತು ಆದೇಶ.
ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಶೇರ್ ಮಾಡಿರುವ ವಿಡಿಯೊ ತುಣುಕು ಮತ್ತು ಆದೇಶ.   

ಬೆಂಗಳೂರು: ‘ಪಕ್ಕೆಲುಬು’ ಎಂದು ಉಚ್ಚರಿಸಲು ಬಾರದ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕನ ಕಿರುಕುಳ ಮತ್ತು ಕನ್ನಡ ಅಕ್ಷರ ಮಾಲೆಯಲ್ಲಿ ಸುಂದರವಾಗಿ ಗಾದೆಯನ್ನು ಹೇಳುವ ಪುಟಾಣಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ವತಃ ಶಿಕ್ಷಣ ಸಚಿವರ ವಾಟ್ಸ್‌ಆ್ಯಪ್‌ ಗುಂಪಿನಲ್ಲೇ ‘ಪಕ್ಕೆಲುಬು’ ವಿಡಿಯೊ ಹಾಕಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಉಚ್ಚಾರಣೆ ಸಮಸ್ಯೆ ಕೆಲವು ಮಕ್ಕಳಲ್ಲಿ ಸಾಮಾನ್ಯ. ಕಾಲಕ್ರಮೇಣ ಅವರು ಸರಿ ಹೋಗುತ್ತಾರೆ. ವಿದ್ಯಾರ್ಥಿಯ ಇಂತಹ ನ್ಯೂನತೆಯನ್ನು ಶಿಕ್ಷಕ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ತಪ್ಪು, ಶಿಕ್ಷಣ ಸಚಿವರ ವಾಟ್ಸ್ಆ್ಯಪ್‌ ಗುಂಪಿನಲ್ಲೂ ಇದು ಹೇಗೆ ಸೇರಿಬಿಟ್ಟಿತು?’ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

ಉಚ್ಚಾರಣೆ ಸಮಸ್ಯೆಯನ್ನು ನಿವಾರಿಸಿದ ಬಗೆಯನ್ನು ಶಿಕ್ಷಕ ತೋರಿಸಿದ್ದೇ ಆದರೆ ಅದು ಇತರ ಶಿಕ್ಷಕರಿಗೆ ಮಾದರಿಯಾಗಿರುತ್ತಿತ್ತು. ಆದರೆ ಹಾಗೆ ಮಾಡಿಲ್ಲ. ಇಂತಹ ವಿಡಿಯೊಗಳಿಂದ ಮುಂದೆ ಮಗು ಸಮಾಜದಲ್ಲಿ ಭಾರಿ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಕ್ರಮಕ್ಕೆ ಸಚಿವರ ಸೂಚನೆ: ಈಶಿಕ್ಷಕನನ್ನು ಪತ್ತೆಹಚ್ಚಲು ಸೈಬರ್‌ ಅಪರಾಧ ಠಾಣೆಗೆ ದೂರು ನೀಡಬೇಕು, ಶಿಕ್ಷಕ ಮಾತ್ರವಲ್ಲ, ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇಂತಹ ಪ್ರಕರಣಗಳಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸುತ್ತೋಲೆ ಹೊರಡಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.