ADVERTISEMENT

ರಾಜ್ಯದಾದ್ಯಂತ ತರಗತಿ ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ: ಸಚಿವ ನಾಗೇಶ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 21:15 IST
Last Updated 24 ಆಗಸ್ಟ್ 2021, 21:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ರಾಜ್ಯದಾದ್ಯಂತ 9 ಮತ್ತು 10ನೇ ತರಗತಿಯ ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ‘ಬೇಸಿಗೆ ರಜೆ ಬಳಿಕ ಶಾಲೆ ಆರಂಭದ ಮೊದಲ ದಿನ ಹಾಜರಾತಿ ಕಡಿಮೆಯೇ ಇರುತ್ತದೆ. ಆದರೆ, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೆಲವು ಜಿಲ್ಲೆಗಳಲ್ಲಿ ಶೇ 76ಕ್ಕೂ ಹೆಚ್ಚಿದೆ. ಒಟ್ಟಾರೆ ಹಾಜರಾತಿ ಶೇ 41ಕ್ಕೂ ಹೆಚ್ಚಿದೆ’ ಎಂದರು.

‘ಆನ್‌ಲೈನ್ ತರಗತಿಗಳು ಹಲವು ಕಾರಣಗಳಿಂದ ಮಕ್ಕಳನ್ನು ತಲುಪುತ್ತಿರಲಿಲ್ಲ. ಹಲವೆಡೆ ನೆಟ್‌ವರ್ಕ್ ಸಮಸ್ಯೆ ಇತ್ತು. ಸಾಕಷ್ಟು ಮಕ್ಕಳಿಗೆ ಮನೆಯಲ್ಲಿ ಸ್ಮಾರ್ಟ್‌ಫೋನ್ ಇರಲಿಲ್ಲ. ಮತ್ತೆ ಕೆಲವೆಡೆ ಮೊಬೈಲ್‌ ಫೋನ್ ಮತ್ತು ನೆಟ್‌ವರ್ಕ್ ಇದ್ದರೂ ಬೇರೆ ಸಮಸ್ಯೆಗಳು ಎದುರಾಗಿದ್ದವು' ಎಂದರು.

ADVERTISEMENT

ಸೀಟುಗಳ ಕೊರತೆ ಇಲ್ಲ: 'ಎಸ್ಸೆಸ್ಸೆಲ್ಸಿ ಉತ್ತೀರ್ಣ ಆಗಿರುವ ಎಲ್ಲರಿಗೂ ಕಾಲೇಜುಗಳಲ್ಲಿ ಪ್ರವೇಶ ಸಿಗಲಿದೆ. ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ತರಗತಿ ಆರಂಭಿಸಲು ಮೂಲಸೌಕರ್ಯ ಸೇರಿದಂತೆ ಅಗತ್ಯ ಸಂಪನ್ಮೂಲವನ್ನು ಮಂಜೂರು ಮಾಡಲಾಗುವುದು’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.