ADVERTISEMENT

‘ಹಾರ್ನ್‌’ ಮಾಡಬೇಡ ಎಂದಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 19:30 IST
Last Updated 1 ಜನವರಿ 2022, 19:30 IST

ಬೆಂಗಳೂರು: ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಯುವಕರಿಬ್ಬರು ಅನವಶ್ಯಕವಾಗಿ ‘ಹಾರ್ನ್‌’ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು. ಈ ಸಂಬಂಧ 10 ಮಂದಿ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸಂಜೋಗ್‌ ರಮೇಶ್‌, ತರುಣ್‌, ಕ್ರಿಸ್ಪಿ ಜಾನ್‌, ಕಾಕಿ, ಆಂಥೋಣಿ ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ನೋಟಿಸ್‌ ನೀಡಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎಚ್‌ಎಸ್‌ಆರ್‌ ಬಡಾವಣೆ ನಿವಾಸಿಯಾಗಿರುವ ಗೌತಮ್‌ ಕಲ್ಯಾಣ್‌, ತನ್ನ ಸಹಪಾಠಿ ಕೆ.ಜಿ.ಶೋಭಿತ್‌ ಜೊತೆ ಕಾಲೇಜು ಸಮೀಪದ ರಸ್ತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದ. ಹಿಂದಿನಿಂದ ಮತ್ತೊಂದು ಬೈಕ್‌ನಲ್ಲಿ ರಮೇಶ್‌ ಹಾಗೂ ತರುಣ್‌ ಅನಗತ್ಯವಾಗಿ ‘ಹಾರ್ನ್‌’ ಮಾಡುತ್ತಾ ಬರುತ್ತಿದ್ದರು. ಇದಕ್ಕೆ ಕಲ್ಯಾಣ್‌ ಆಕ್ಷೇಪ ವ್ಯಕ್ತಪಡಿಸಿದ್ದ. ಆಗ ಅವರ ನಡುವೆ ವಾಗ್ವಾದ ನಡೆದಿತ್ತು. ಸ್ಥಳದಲ್ಲಿದ್ದ ಕಾಲೇಜಿನ ಇತರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು’ ಎಂದು ಹೇಳಿದ್ದಾರೆ.

ADVERTISEMENT

‘ಅಷ್ಟಕ್ಕೆ ಸುಮ್ಮನಾಗದ ತರುಣ್‌, ಮಧ್ಯಾಹ್ನದ ಹೊತ್ತಿಗೆ ಇತರ ಗೆಳೆಯರೊಡನೆ ಕಾರಿನಲ್ಲಿ ಬಂದಿದ್ದ. ಕಲ್ಯಾಣ್‌ ಹಾಗೂ ಶೋಭಿತ್‌ ಅವರನ್ನು ಸುತ್ತುವರಿದಿದ್ದ ಆರೋಪಿಗಳು ಕ್ರಿಕೆಟ್‌ ಬ್ಯಾಟ್‌, ವಿಕೆಟ್‌ ಹಾಗೂ ಹಾಕಿ ಸ್ಟಿಕ್‌ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.