ADVERTISEMENT

ವಿಶ್ವಕರ್ಮರ ಕುಲಶಾಸ್ತ್ರ ಅಧ್ಯಯನ: ಸಿ.ಎಂ

ಸಮಾಜದ ಮುಖಂಡರ ರಾಜ್ಯಮಟ್ಟದ ಸಮಾವೇಶದಲ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 17:57 IST
Last Updated 15 ಜುಲೈ 2022, 17:57 IST
ಬೆಂಗಳೂರಿನಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ ವಿಶ್ವಕರ್ಮ ಸಮಾಜದ ಮುಖಂಡರ ಸಮಾವೇಶದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಭಾ ಅಧ್ಯಕ್ಷ ಕೆ.ಪಿ ನಂಜುಂಡಿ ವಿಶ್ವಕರ್ಮರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು
ಬೆಂಗಳೂರಿನಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ ವಿಶ್ವಕರ್ಮ ಸಮಾಜದ ಮುಖಂಡರ ಸಮಾವೇಶದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಭಾ ಅಧ್ಯಕ್ಷ ಕೆ.ಪಿ ನಂಜುಂಡಿ ವಿಶ್ವಕರ್ಮರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು   

ಬೆಂಗಳೂರು: ವಿಶ್ವಕರ್ಮ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅರಮನೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾಜದ ಮುಖಂಡರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹15 ಕೋಟಿ ನೀಡಲಾಗಿದೆ. ಹೆಚ್ಚುವರಿ ₹10 ಕೋಟಿ ಬಿಡುಗಡೆ ಮಾಡಲಾಗುವುದು. ₹5 ಕೋಟಿ ವೆಚ್ಚದಲ್ಲಿ ಆರಂಭಿಸುತ್ತಿರುವ ವಿಶ್ವಕರ್ಮ ಸಂಸ್ಥೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿ, ವಿಶ್ವವಿದ್ಯಾಲಯದ ಸ್ಥಾನ ನೀಡಲಾಗುವುದು. ಸಮಾಜದ ಮಕ್ಕಳಿಗೆ ಪ್ರತ್ಯೇಕ ಎರಡು ವಸತಿ ಶಾಲೆ ಆರಂಭಿಸಲಾಗುವುದು.ಅಪೂರ್ಣಗೊಂಡ 80 ವಿಶ್ವಕರ್ಮ ಸಮುದಾಯ ಭವನಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ADVERTISEMENT

ಆಧುನಿಕ ತಂತ್ರಜ್ಞಾನಕ್ಕೆ ವಿಶ್ವಕರ್ಮರ ಐದು ಕುಶಲಕಲೆಗಳು, ನೈಪುಣ್ಯತೆಯೇ ಬುನಾದಿ. ವಂಶಪಾರಂಪರ್ಯವಾಗಿ ಒಲಿದು ಬಂದ ಕಲೆಯನ್ನು ಇಂದಿನ ಪೀಳಿಗೆ ಮುಂದುವರಿಸಬೇಕು. ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ
ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ಸಮಾಜದ ಜನರು ಶಿಕ್ಷಣ, ರಾಜಕೀಯದಲ್ಲಿ ಹಿಂದುಳಿದಿದ್ದಾರೆ. ನಾಗರಿಕತೆ ಆರಂಭದಿಂದಲೂ ಗುಡ್ಡಗಾಡುಗಳಲ್ಲಿ ಬದುಕು ಕಟ್ಟಿಕೊಂಡು ಬಂದಿದ್ದಾರೆ. ಪ್ರವರ್ಗ ’2 ಎ’ ಬದಲು, ಉತ್ತರ ಭಾರತದ ರಾಜ್ಯಗಳಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಸಾಮಾಜಿಕ ನ್ಯಾಯ ದೊರಕಿಸಬೇಕು. ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ವಿಶ್ವಕರ್ಮರ ಅಥವಾ ಜಕ್ಕಣಾಚಾರಿ ಅವರ ಹೆಸರು ಇಡಬೇಕು ಎಂದು ಕೋರಿದರು.

ಸಭಾದ ಮುಖಂಡರಾದ ಮಳವಳ್ಳಿ ಶ್ರೀನಿವಾಸ್‌, ಲಕ್ಷ್ಮಿ ನಂಜುಂಡಿ, ಭಾಗ್ಯಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.