ಬೆಂಗಳೂರು: ವರ್ಗಾವಣೆ ಆದೇಶವನ್ನು ಕೋರ್ಟ್ ರದ್ದು ಮಾಡಿದ್ದರೂ, ಮೂಲ ಸ್ಥಳಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಉಪ ನೋಂದಣಾಧಿಕಾರಿಗಳು ರಾಜ್ಯ ನೋಂದಣಿ ಮಹಾಪರಿವೀಕ್ಷಕರ ಕಚೇರಿಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಬೆಂಗಳೂರು ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಠಿಕಾಣಿ ಹೂಡಿದ್ದ ಉಪ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿ ಕಚೇರಿಯ ಇತರೆ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲು ನಿರ್ಧರಿಸಿತ್ತು. ಅದಕ್ಕಾಗಿ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿತ್ತು.
ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಹಾಗೂ ಮಹಾನಗರ ಪಾಲಿಕೆ ಕೇಂದ್ರ ಸ್ಥಾನಗಳ ಹುದ್ದೆಗಳನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಷರತ್ತುಗಳನ್ನು ವಿಧಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಉಪ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಹೆಚ್ಚುವರಿ ಉಪ ನೋಂದಣಾಧಿಕಾರಿಗಳು, ಕೇಂದ್ರ ಸ್ಥಾನ ಸಹಾಯಕರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಕೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಹಲವರನ್ನು ವರ್ಗಾವಣೆ ಮಾಡಲಾಗಿತ್ತು.
‘ಸರ್ಕಾರದ ವರ್ಗಾವಣೆ ಆದೇಶವನ್ನು ಕೋರ್ಟ್ ರದ್ದು ಮಾಡಿದೆ. ಆದೇಶಕ್ಕೂ ಮೊದಲು ನಾವು ಕೆಲಸ ಮಾಡುತ್ತಿದ್ದ ಕಚೇರಿಗಳಿಗೆ ತೆರಳಿದ್ದೆವು. ಆದರೆ, ಆ ಕಚೇರಿಯಲ್ಲಿ ಕೆಲಸ ಮಾಡಲು ಅಗತ್ಯವಾದ ಲಾಗಿನ್ ನೀಡಿಲ್ಲ. ಲಾಗಿನ್ ನೀಡದೇ ಇದ್ದರೆ ಸ್ವತ್ತುಗಳ ನೋಂದಣಿ ಕಾರ್ಯ ನಿರ್ವಹಿಸಲು ಆಗುವುದಿಲ್ಲ. ಹಾಗಾಗಿ, ಧರಣಿ ನಡೆಸುತ್ತಿದ್ದೇವೆ’ ಎಂದು ಉಪ ನೋಂದಣಾಧಿಕಾರಿಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.