ಬೆಂಗಳೂರು: ಮಳೆ–ಬಿಸಿಲಿನಿಂದಾಗಿ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದೊಂದು ತಿಂಗಳಲ್ಲಿ 1,955 ಪ್ರಕರಣಗಳು ದೃಢಪಟ್ಟಿವೆ.
ಡೆಂಗಿ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಈ ವರ್ಷ ಈಗಾಗಲೇ 98 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಿದೆ. ಅವರಲ್ಲಿ 45 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 5,749ಕ್ಕೆ ತಲುಪಿದೆ. ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಈ ಜ್ವರ ಬರಲಿದ್ದು, ಬಿಸಿಲು–ಮಳೆಯಿಂದಾಗಿ ಈ ಸೊಳ್ಳೆಗಳು ಸಕ್ರಿಯವಾಗಿವೆ.
2023ರಲ್ಲಿ 16,500ಕ್ಕೂ ಅಧಿಕ ಡೆಂಗಿ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿದ್ದವು. 9 ಮಂದಿ ಮೃತಪಟ್ಟಿದ್ದರು. ಈ ವರ್ಷ ಜ್ವರ ಪೀಡಿತರಲ್ಲಿ ಐವರು ಮರಣ ಹೊಂದಿರುವುದು ದೃಢಪಟ್ಟಿದೆ.
ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,595 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 1,385 ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಚಿಕ್ಕಮಗಳೂರು (491), ಮೈಸೂರು (431), ಹಾವೇರಿ (402), ಚಿತ್ರದುರ್ಗ (253), ಶಿವಮೊಗ್ಗ (249) ಹಾಗೂ ದಕ್ಷಿಣ ಕನ್ನಡ (233) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಖಚಿತಪಟ್ಟಿವೆ.
27 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 30 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 12 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 897 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ಶಿವಮೊಗ್ಗ (147), ವಿಜಯಪುರ (105) ಹಾಗೂ ಮೈಸೂರು (82) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.